ಆಳ ಅಳೆಯಲಾರದ ಸಮುದ್ರದಲ್ಲಿ..
ಆಯ ತಪ್ಪಿ ಬಿದ್ದಾಗ,
ಅವರಿವರ ಸಹಾಯದಿಂದ
ಹೇಗೋ ದಡ ಸೇರಿದೆ......
ಹೃದಯದಾಳದಿಂದ ಬಂದ ಭಾವವೆಂದು ನಂಬಿ,
ಅವನ ಪ್ರೀತಿಯ ಅಲೆಯಲ್ಲಿ ತೇಲಿ ಹೋದಾಗ....
ಎಷ್ಟು ಕೈಚಾಚಿದರೂ...ಸಿಗದಾಗಿದೆ,
ಎಷ್ಟು ಕಣ್ಣರಳಿಸಿದರೂ....ಕಾಣದಾಗಿದೆ,
ಬದುಕಿನ ಕಿನಾರೆ.
ಎಂದೋ ಒಮ್ಮೆ ಕಂಡ
ನಿನ್ನ ಮೋಹಕ ನೋಟದ
ಬಲೆಗೆ ಸಿಲುಕಿಕೊಂಡು....
ಇಂದಿಗೂ ಅದರಿಂದ ಹೊರಬರಲಾರದೆ...
ಅದರೊಳಗೆ ಇರಲಾರದೆ.......
ವಿಲಿ ವಿಲಿ ಒದ್ದಡುವಂತಾಗಿದೆ,
ಮೈ ಛಳಿ ಬಿಟ್ಟು ಈಜದಂತಾಗಿದೆ.
ಭೂಮಿಯ ನದಿ ನಾನಾದರೆ...
ನಾ ಸಾಗಿದೆಡೆಯೆಲ್ಲಾ ಕಾಣುವ ಆಗಸ ನೀ..
ಆವಿಯಾಗಿ ನಿನ್ನ ಸೇರಬೇಕೆಂದೆ..
ಮಳೆಹನಿಯಾಗಿ ನಿನ್ನ ಪಡೆಯಬಯಸಿದೆ..
ನಾ ಆವಿಯಾಗುವ ಮುನ್ನ,
ನೀ ಮಳೆ ಹನಿಯಾಗಿ ಧರೆಗಿಳಿದೆ.
ನಿನ್ನ ಸೇರುವ ಕನಸು,ನಿನ್ನ ಪಡೆಯುವ ಆಸೆ..
ಮಳೆನೀರಾಗಿ ನದಿಯಲಿ ಕೊಚ್ಚಿ ಹೋಗಿದೆ..
ನೀರಿಲ್ಲದ ನದಿಯಾಗಿ ನಾ ಬರಿದಾಗಿರುವೆ,
ದಾಹ ತಣಿಸಲಾರದ ಬರೀ...ನೆಲವಾಗಿರುವೆ,
ನಾನಿಂದು ಭುವಿಯಾದರೇ....
ನೀನದೇ ಅಂಬರವಾಗಿರುವೆ.
ನಿನ್ನ ಪಡೆಯುವ ಮಾತೇ ಇಲ್ಲ.....
ನಾವಾಗಲೇ ಒಂದಾಗಿದ್ದೆವೆ....
ಅಂತ್ಯವೇ ಇಲ್ಲದ ದಿಗಂತದಂತೆ.
ಎಂದೆಂದೂ ಸೇರಿದಂತಿದ್ದರೂ,
ಎಂದೆಂದಿಗೂ ಒಂದಾಗಲಾರದಂತೆ.........