ನಿನ್ನ ಲೇಖನಿಗೆ ತುಂಬಿ
ಬಣ್ಣ ಬಣ್ಣದ ಶಾಯಿ
ಬರೆಯದಿರು ಆತ್ಮವಿಲ್ಲದ
ನೂರಾರು ವ್ಯರ್ಥ ಕವಿತೆ!
ಇರಲಿ ಕಿಂಚಿತ್ತಾದರೂ
ರಕ್ತ ಚೀತ್ಕಾರದ ಚರಿತೆ,
ಅಲ್ಲದಿದ್ದರೂ ಹರಿಯಲಿ
ಬಡವನ ಬೆವರ ಹನಿಯ ಕಿರು ಒರತೆ !
ಎತ್ತೆತ್ತ ನೋಡಲತ್ತತ್ತ ನಗುತಿದೆ
ಕ್ರೂರ ಮುಖ
ಕಂಗೆಡಿಸಿ ಮೇಲೆ ಬಿದ್ದಿದೆ ಹರಿ ಹಾಯ್ದು
ಚಾಚಿ ವ್ಯಾಘ್ರನಖ
ಬಾಚಿ ಬಿಗಿದಪ್ಪಿ ಉಸಿರುಗಟ್ಟಿಸಲೆತ್ನಿಸಿದೆ
ದೋಚಿ ಎಲ್ಲ ಸುಖ
ಸೋತು ಸೊರಗಿದರೂ ಮತ್ತೆ ಎಚ್ಚೆತ್ತು
ಹೋರಾಡುವ ವ್ಯರ್ಥ ಪ್ರಯತ್ನ
ಮಾಡಿ ಮಡಿವ ನನ್ನ ತುಸು ಯತ್ನ
ಗೆಲ್ಲಲಾರೆನೆಂದಿಗೂ ನಾ ಅರಿತೆ ವಿಧಿ ಬರಹ
ಮೆಟ್ಟಿ ನಿಲ್ಲಲಾರೆ ಮರೆತು ಕೂಡಾ
ಇದು ಜೀವನದ ನಿಜ ಅಣಕ.
ಯಾರು ನಿನ್ನ ಒಂದು ಚಿತ್ರದಂತೆ ಗೀಚಿ ಹೋದವರು?
ಆ ರವಿವರ್ಮನಾ? ಇಲ್ಲ ಸಾಕ್ಷಾತ್ ಬ್ರಹ್ಮಾನಾ?
ಯಾರು ನಿನ್ನ ಕೆನ್ನೆ ಮೇಲೆ ಕುಳಿಯನಿಟ್ಟವರು?
ಆ ಮದನನೇನಾ? ಅಥವಾ ಕಳ್ಳ ಕೃಷ್ಣನಾ?
ಹುಬ್ಬು ತೀಡಿ ಕಾಮನ ಬಿಲ್ಲ ಹೊಸೆದವರ್ಯಾರೋ?
ಕಣ್ಣ ಜೋಡಿ ತಂದು ಇಟ್ಟು ಮೋಡಿ ಮಾಡಿದೋರ್ಯಾರೋ?
ಬೆಣ್ಣೆ ಮುದ್ದೆ ಜಾರಿ ಬಂದು ನಿನ್ನ ನಯ ಕೆನ್ನೆಯಾಯ್ತೋ.
ಮೇಘದ ತುಂಡು ತಂದು ಮುಂಗುರಳ ಮಾಡಲಾಯ್ತೋ?
ತುಟಿಯ ರಂಗು ಸೂರ್ಯ ತಾನೇ ಸಂಜೆ ತಂದು ಕೊಟ್ಟನೋ?
ಆ ಮುಗುಳು ನಗು ಚಂದ್ರ ಪೌರ್ಣಿಮೆಗೆ ಕಳೆದುಬಿಟ್ಟನೋ?
ಗುಲಾಬಿ ರಂಗು ನಿನ್ನ ಮೊಗದಿ ತನ್ನ ಅಂದ ಚೆಲ್ಲಿತೋ
ಕೋಗಿಲೆ ತನ್ನ ಧ್ವನಿಯ ನಿನಗೆಂದೇ ಧಾರೆಯೆರೆಯಿತೋ?.
ಬೆಟ್ಟದ ಬದಿಯಿಂದ
ಮುಂಜಾನೆಯ ರವಿ ಇಣುಕಿದಂತೆ
ಕಿಟಕಿ ಹಿಂದಿನ ಕಂಗಳು,
ಕಂಡೂ ಕಾಣದ ಮುಂಗುರುಳು
ಗಲಗಲ ಬಳೆಯ ತರಂಗ
ಕಿಲಕಿಲ ನಗುವಿನಂತರಂಗ,
ಎದುರು ಬರಲಾರರು ಚೆಲುವೆಯರು
ಬಂದರೂ ಬಹು ಲಾಸ್ಯ ಲಜ್ಜೆ
ಇಡುತಲಿ ಒಂದೊಂದೇ ಹೆಜ್ಜೆ
ಮುಗಿಲಿಂದ ಬರಗಾಲದಿ ಮಳೆ ಹನಿ
ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ !
ಕಿರು ಹನತೆ ಉರಿಯಂತೆ ತುಟಿ ರಂಗು
ಪತಂಗ ಹಾರಿದಂತೆ ತೆಳು ಸೆರಗು
ಕಾವ್ಯದೊಡತಿಯರು,
ಮೌನವೇ ಮಾತು
ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ
ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ
ಒಮ್ಮೆ ಧಾರಾಳ ದಮಯಂತಿ
ಮಗದೊಮ್ಮೆ ಮುನಿದ ಮಗುವಂತೆ
ಅಲ್ಲಿ ಪ್ರೇಮ ಪ್ರೀತಿಯನ್ನರಸುವ
ಹುಡುಗನ ನಿರಂತರ ಬೇಟೆ !
ಅರಿವಾಗುವ ಮುನ್ನವೇ ಮಾನಸಿಕ
ಪತ್ನಿಯಾಗಿರುತ್ತಾಳೆ,
ಛೇಧಿಸಿ ಹೃದಯ ಕೋಟೆ.