ನಮ್ಮಪ್ಪ ಉಳುಮೆಗಾರ
ಕಂಡೋರ ಹೊಲದಲ್ಲಿ ದುಡಿಯೋ
ದುಡಿಮೆಗಾರ.
ತನ್ದು ಅಂತ ನಾಕು ಗದ್ದೆ ಮಾಡಿ
ತಾನೂ ಒಬ್ಬ ರೈತ ತೋರ್ಸಿದ
ಛಲಗಾರ.
ಕಾಡಲ್ಲಿ ಮನೆ ಕಟ್ಟಿ
ಕಂಡೋರ ಮನೆಯ ಕೂಲಿ ಮಾಡಿ
ಕೈಲಾದ ನಾಕು ಕಾಸು ದುಡಿದು
ನಮ್ಮನ್ನ ಸಾಕಿ ಸಲುಹಿದಾತ
ಸಂಜೆ ಕುಡಿತ
ಅದಕಿಲ್ಲ ಹಿಡಿತ
ಆದ್ರೂ ಅವಂದು ಭಾರಿ ದುಡಿತ
ಏನೇ ಕಷ್ಟ ಬಂದ್ರೂ ಸಹ
ಎದೆಗುಂದದೆ
ಕಂಬನಿ ಒದ್ದು,
ಕಂಬಳಿ ಹೊದ್ದು
ಮಳೆ ಗುಡುಗೆನ್ನದೆ
ಚಳಿ ನಡುಗೆನ್ನದೆ
ದುಡಿ ದುಡಿದು
ಬೇರೆಯವ್ರ ಕಣಜವ ತುಂಬಿದಾತ.
ಆಳು ಹಾಕಿ ಗುತ್ತಿಗೆ ಹಿಡಿದು
ತಾನೂ ದನಿಕನಾಗುವ
ಕನಸು ಕಂಡಾತ.
ವರ್ಷಗಟ್ಲೆ ಗುತ್ತಿಗೆ ಮಾಡಿ
ಲಾಭ ಬರದೆ ಆಕಾಶ ನೋಡಿ
ಕಣ್ ಕಣ್ ಬಿಟ್ಟಾತ.
ಅಪ್ಪಾ...
ನೀನ್ಯಾಕೆ ಬಡವನಾಗಿ ಹುಟ್ಟಿದೆ?