ನಾ ಸ್ನಾನ ಮಾಡುವಾಗ
ನೀ ತಲೆಯ ಒರೆಸಿದಿ
ನಾ ಚಂದ ಕಾಣಲೆಂದು
ಬಣ್ಣ ಬಣ್ಣದ ಅಂಗಿ ತೋಡಿಸಿದಿ
ನನ್ನಯ ಬೆಳೆವಣಿಗೆಯಲಿ
ನೀ ಖುಷಿಯ ಕಾಣುತ
ಹಳೆಯ ಉಡುಗಿ ಉಡುತ ನೀ ಬದುಕೀದಿ
ಯವ್ವಾ ನಿನ್ನ ಮರೆಯಲಿ ಹ್ಯಾಂಗ
ಮರೆತು ಬಾಳಲಿ ಹ್ಯಾಂಗ..!
ನಿನ್ ಕಂಕಳಾಗ್ ನನ್ ಎತ್ಕೊಂಡು
ಕಾಲಾಗ್ ಚಪ್ಲಿ ಇಲ್ದ
ಮುಳ್ ಚುಚ್ಚಿದ್ರು
ಬರಿಗಾಲಾಗ ಹೋಲದ ಮ್ಯಾರಿಮ್ಯಾಲ
ನೀ ನಡಿದೀದಿ..
ಮೈ ಮುರಿದು ದುಡುದೀದಿ
ಬಿಸಿ ಅನ್ನ, ಜೋಳದ ರೊಟ್ಟಿ
ಹಾಲು ಮೊಸರು ತುಪ್ಪ ನೀಡೀದಿ
ಕೂಸು ಬೆಳಿಲೆಂದು
ಸಿಹಿ ತಿನಿಸು ತಿನಿಸೀದಿ..
ನೀನು ಉಣಲಾರ್ದ
ಹಸಗೊಂಡು ನೀರ್ ಕುಡಿದು
ಹಂಗಾ ಮಲಗೀದಿ..
ನಿನ್ನ ಮರೆಯಲಿ ಹ್ಯಾಂಗ
ಋಣವ ತೀರಿಸಲಿ ಹ್ಯಾಂಗ..!
ಮಗ ಶ್ಯಾಣ್ಯಾ ಆಗಲೆಂತ
ಸಾಲೀಗಿ ಸೇರಿಸೀದಿ
ರೊಕ್ಕ ಕೊಟ್ಟು ಪಟ್ಟಣಕ
ಓದಾಕ ಕಳಿಸೀದಿ
ಬಂಗಾರ ಬೇಡ್ಲಿಲ್ಲ
ತೊಳಬಂಧಿ ಬಿಗಿಲಿಲ್ಲ
ನಾನಾ ಬಂಗಾರ ಅಂದೀದಿ..
ಮಗ ಅಂದ್ರ ಸಾಕು ಸಾಗರ ಬಿಳ್ತೀದಿ..
ಯವ್ವಾ ನಿನ್ನ ಮರೆಯಲಿ ಹ್ಯಾಂಗ
ನಿನ್ನ ಋಣವ ತೀರಿಸಲಿ ಹ್ಯಾಂಗ..!
ನಿನಗಾಗಿ ಬದುಕೀನಿ
ನಿನ್ನ ಪ್ರತಿಕ್ಷಣವೂ ನೆನಿತೀನಿ
ನೀನಿತ್ತ ಜನುಮಕ
ನೂರ್ನಮನ ಸಲ್ಲಿಸುತ..
ಮರು ಜನುವಿದ್ದರೆ ನಿನ್ನ ಮಗನಾಗೇ
ನಿನ್ನ ಮಡಿಲಲ್ಲೇ ಹುಟ್ತೀನಿ..
ಯವ್ವಾ..
ನಿನ್ನ ಋಣವ ತೀರಿಸಲಿ ಹ್ಯಾಂಗ
ನಿನ್ನ ಕೂಸಾಗಿ ಬದುಕುವೆನು ಹೀಂಗ..!
ನನಗೆ ಬಂದ ಕಷ್ಟ ನನಗೇ ಸಾಕು
ಎಂದು ಗೊಣಗುವ ನಾವು
ನಮ್ಮ ಜನನಕ್ಕೆ ಕಾರಣರಾದವರ ಕಷ್ಟ ನೋಡಬಹುದಲ್ಲ ?
ನನಗೆ ಸಿಕ್ಕ ಸುಖದ ಜೀವನ ನಮ್ಮ
ಮಕ್ಕಳಿಗೆ ಇರಲಿ ಎಂದು ಬಯಸುವ
ನಾವು ನಮ್ಮ ಜನ್ಮ ಹೀಗೆ ಇರಲಿ ಎಂದು ಬಯಸಿದವರ ಸುಖದ ಬಗ್ಗೆ ಯೋಚಿಸಬಹುದಲ್ಲ?
ಕೆಲಸಕ್ಕೆ ಸೇರುವಾಗ ತಂದೆ ತಾಯಿಗೆ ಕಾಡಿ ಬೇಡುವ ನಾವು ಕೆಲ ದಿನಗಳಲ್ಲಿ
ಅವರ ಆಸೆಗೆ ನಿರಾಸೆ ಮಾಡಿ
ಮತ್ತೇ ಅವರ ಮಡಿಲಿಗೆ ಒರಗಲು ಬಯಸಬಹುದಾ ?
ಕಷ್ಟದಿಂದಲೇ ಬಂದು ನಮ್ಮ ಕಷ್ಟಕ್ಕಿಂತ ಮೂರು ಪಟ್ಟು ಕಷ್ಡದಿಂದ ಸುಖದ ಜೀವನ ಸಾಗಿಸಲು ಮುಂದಾದವರು ನಮ್ಮ ಮುಂದೆನೇ ಇರುವಾಗ
ನಾನು ಮಾತ್ರ ಬೇಗ ಸುಖದ ಜೀವನ ಸಾಗಿಸಬೇಕು ಎಂದು ಕನಸು ಕಾಣಬಹುದಾ ?
ನಾನು ನನ್ನ ಮಕ್ಕಳು ಸುಖದಿಂದ ಬಾಳಬೇಕು
ಎಂದು ಬಯಸುವ ನಾವು ನಮ್ಮ ತಂದೆ ತಾಯಿ
ಅವರ ತಂದೆ ತಾಯಿ ಹೇಗೆ ಜೀವನ ಸಾಗಿಸಿದರು ಎಂಬುದನ್ನ ತಿಳಿಯಲು ಬಯಸಬಹುದಲ್ಲ ?
ಬೇರೆಯವರು ಹೇಗೆ ಬಾಳಿದರೆನು
ಮತ್ತೊಬ್ಬರು ಹೇಗೆ ಬೆಳೆದರೆನು
ನನಗೆ ನನ್ನ ದಾರಿ ಸುಗಮವಾಗಿರಬೇಕು
ಎಂದು ಬಯಸುವ ನಾವು
ಬೇರೆಯವರು ಹೀಗೆಯೇ ಯೋಚಿಸಿದರೆ ಹೇಗೆ ಎಂದು ಯೋಚಿಸಬಹುದಲ್ಲ ?
ಮೇಲಿನವರು ಬೆಳೆದ ಹಾಗೆ
ನಾನೂ ಬೆಳೆಯಬಹುದಾ ಎಂದು ಯೋಚಿಸಿ
ಅವರ ದಾರಿಯಲ್ಲಿ ಸಾಗಿದರೆ ನಾನೂ ಜಯಶಾಲಿ
ಆಗಬಹುದಾ ಎಂದು ಯೋಚಿಸಿ ,
ಕಾರಣ ಜಯ ಎಂಬ ಶಬ್ದಕ್ಕೆ ಯಾರೂ
ತಡೆಗೋಡೆ ಹಾಕಿರುವದಿಲ್ಲ ಎಂಬುದನ್ನ ಅರಿಯಬಹುದಾ ?
ರಾತ್ರಿಯೆಂದರೆ
ಬಲು ಇಷ್ಟ ನನಗೆ
ಕನಸಲ್ಲಾದರೂ
ಅಮ್ಮ ಬರುವಳೆಂದು..!
ಹಾಗೆಯೇ
ಹಗಲೆಂದರೂ
ಬಲು ಇಷ್ಟ ಎನಗೆ
ಅತ್ತು ಅತ್ತು ಕಣ್ಣುಗಳು
ನೋವಾಯಿತೆಂದು..!
ಪ್ರತಿದಿನವೂ ಕಾಯುವೆ ನಾ
ಸಂಜೆಗೆ ಹಾಗೂ ಮುಂಜಾವಿಗೆ..!!
ಮೂಡಣದಿ ರವಿ ಬಂದಾಯ್ತು
ಮನೆಯಂಗಳ ಶುಚಿಗೊಳಿಸಿ
ರಂಗೋಲಿ ಇಡುವ ಹೊತ್ತಾಯ್ತು
ಆದರೂ ಅಮ್ಮ ಏಕೋ ಬರಲೇ ಇಲ್ಲ..!
ಸದಾ ಕುಟುಂಬಕ್ಕಾಗಿ ದುಡಿಯುವ
ಕೇಳಿದ್ದನ್ನು ಮಾಡಿ ಉಣಿಸುವ ಅಮ್ಮ
ಹಸಿವಿನಿಂದ ನಾ ಕಾಯುತ್ತಿದ್ದರೂ
ಇಂದು ಅಮ್ಮ ಏಕೋ ಬರಲೇ ಇಲ್ಲ…!
ಅಮ್ಮನ ಕೆಲವು ಸೀರೆಗಳು
ಮೂಲೆ ಸೇರಿದವು
ಕೆಲವೊಂದಿಷ್ಟು ಇನ್ಯಾರದೋ ಪಾಲಾದವು
ಅಳಿದುಳಿದ ಕೆಲ ಸೀರೆಗಳು
ಕೌದಿ ತಲೆದಿಂಬಿಗೆ ಮುಡಿಪಾದವು
ದಿನ ರಾತ್ರಿ ತಲೆದಿಂಬಿಗೆ
ಕಂಬನಿಯ ಜೊತೆ ಒರಗುವೆ
ಆದರೂ ಅಮ್ಮ ಏಕೋ ಬರಲೇ ಇಲ್ಲ…!
ಮೊಬೈಲ್ ತರೆದಾಗ
ಕಾಣುವ ಹೆಸರದು ಅಮ್ಮ
ಎಡವಿ ಬಿದ್ದಾಗ
ಬರುವ ಕೂಗು ಅಮ್ಮ
ದುಃಖಲ್ಲೂ ನೆನಪಾಗಿ
ಮಿಕ್ಕೆಲ್ಲ ಸಮಯದಲ್ಲೂ
ಕನಸಾಗಿ ಕಾಡುವ ಅಮ್ಮ
ಮತ್ತೆಂದಿಗೂ ಬರುವುದೇ ಇಲ್ಲ...!
- ಸಿದ್ದು ಕನ್ನಡಿಗ