ಯಾರು ಇಲ್ಲದ ಈ ಒಂಟಿ ಮನಕೆ,
ತೂಗು ಹಾಕಲೇ ಖಾಲಿ ಫಲಖ...!
ಮನವು ಕಾಡುತಿದೆ ನೀ ಯಾರೆಂದು ತೆರೆದು ನೋಡುವೆಯ ನನ್ನೆದೆಯ ಚಿಲಕ...!
ಎದೆಯ ಪಂಜರದಲ್ಲಿ ಬಚ್ಚಿಟ್ಟ ಈ ಪ್ರೀತಿ,
ಹಾರುತಿದೆ ಬಿಡುಗಡೆ ಸಿಕ್ಕಿದ ಪಕ್ಷಿಯ ರೀತಿ...!
ಆ ಹಾರುವ ಪಕ್ಷಿಯ ಯಾರೋ ಹಿಡಿಯುವ ಮುನ್ನ,
ಒಂದು ಬಾರಿ ಆದರೂ ತಟ್ಟಿನೋಡು
ನನ್ನ ಎದೆಯ ಬಾಗಿಲನ್ನ....!
ಎಮ್.ಎಸ್.ಭೋವಿ...✍️
ನಡೆಯುವ ಆಸೆ ನಿನ್ನೊಟ್ಟಿಗೆ ಕೈ ಹಿಡಿದು,
ಹೇಳಲಾಗದು ನಿನ್ನೆದುರು ನನ್ನುಸಿರ ಬಿಗಿ ಹಿಡಿದು...!
ತಿಳಿದು ತಿಳಿಯದೆ ಇರುವಂಥ ಈ ನಿನ್ನ ನಡವಳಿಕೆ,
ಮನದಿ ಮೂಡಿತಿದೆ ಒಂಟಿತನದ ಬೇಸರಿಕೆ...!
ಮರೆಯಲಾಗದ ನಿನ್ನ ನೆನಪಿನೊಟ್ಟಿಗೆ,
ಅರ್ಥವಾಗದ ಬದುಕು ನನ್ನದು...!
ಹರಿದು ಹೋಗುವ ಕಾಗದದ ಮೇಲೆ,
ಏನೆಂದು ಬರೆಯಬೇಕೋ ನನಗೆ ಅರಿಯದು...!
ಎಮ್.ಎಸ್.ಭೋವಿ...✍️
ಆಕೆ ಅಲ್ಲಿಯೇ ನಿಂತಿದ್ದಳು ದೂರದಲೆಗಳ ಅಬ್ಬರಕ್ಕೆ ಚಲಿಸದೆ ನಿಂತ ಚಿಗುರೆಳೆಯಂತೆ, ಕಾರ್ಮೋಡದ ಸದ್ದು ಕೇಳಿ ಹೆದರಿ ಅಡಗಿದ ಪುಟ್ಟ ಕಂದನಂತೆ, ಬೆಚ್ಚಗಿನ ಹಾಲಲ್ಲಿ ಬಿದ್ದ ಹುಳಿ ಮೊಸರಿನ ದೂರದಂತೆ, ಆಕೆ ಅಲ್ಲಿಯೇ ನಿಂತಿದ್ದಳು ಅಮ್ಮನ ಕಿರುಬೆರಳು ಸಿಗದ ಮಗುವಿನಂತೆ ಅವನ ದಾರಿ ಕಾಯುತ್ತಾ. ಆಗೊಮ್ಮೆ ಈಗೊಮ್ಮೆ ಸುಡು ಬಿಸಿಲಲ್ಲಿ ಇಣುಕಿನೊಡುವ ತಂಗಾಳಿಯಂತೆ ಅವನ ನೆನಪು ಬಂದಾಗ ಸಣ್ಣಗೆ ಕಂಪಿಸುವಳು ಮತ್ತೆ ಸಾವರಿಕೊಂಡು ಹಾದಿ ನೋಡುವಳು.
ಹಿಂದೆಂದೋ ಬರಿದಾದ ರೋಡಿನಲ್ಲಿ ಕೈ ಹಿಡಿದು ನಡೆದಾಗ ಕೇಳಿದಳಂತೆ ಎಲ್ಲಿಯ ವರೆಗೂ ಈ ನಡುಗೆ ಎಂದು ಅವನ ಉತ್ತರ ಇನ್ನೂ ಕೇಳಿಸಲಿಲ್ಲ ಅವಳಿಗೆ! ನನ್ನವನಾ ನೀನು ಗೊತ್ತಿಲ್ಲ ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ, ಮೌನ ಮುರಿಯುವ ಆಸೆಯೂ ಅವಳಿಗೆ ಇರಲಿಲ್ಲ ವರುಷಗಳುರುಳಿದವು, ತಾರೀಕುಗಳು ಬದಲಾದವು ಅವನ ಸುಳಿವಿಲ್ಲ ಮನೆಯಲ್ಲಲ್ಲ ಮನಸಲ್ಲಿ!! ಎದುರುಬದುರು ಕುಳಿತರು ಆತ್ಮೀಯತೆ ಕಂಡುಬಂದಿಲ್ಲ, ತನ್ನ ಸ್ವತ್ತೆಂದು ಕಟ್ಟಿಹಾಕಲಿಲ್ಲ ಅವನನ್ನು, ಸರಿ ತಪ್ಪುಗಳ ಲೆಕ್ಕ ಮೇಲಿನವನಿಗಿರಲಿ ಅವನ ಹೃದಯ ಸೇರುವ ರಸ್ತೆಯಲ್ಲಿ ಹಿಂದಿರಬಹುದು ನಾನು ಮುಂದೆ ಹೋದವರಿಗೆ ಪ್ರಾಶಸ್ತ್ಯ ಕೊಟ್ಟಿರಬಹುದು ಅವನು...
ತಾನು ತನ್ನದೆಂಬುದ ತೊರೆದವಳು ತನ್ನನ್ನೆ ತಾ ಕೊಟ್ಟವಳು ಅವಳಲ್ಲವೆ! ಹಿಂಪಡೆಯುವುದು ಎಷ್ಟು ಸರಿ ಇರಲಿ ಬಿಡು ಹಿಂಪಡೆದು ತಾನಾದರು ಏನು ಮಾಡಿಯಾಳು ಅಸ್ತಿತ್ವದ ಕಳುವಾದಮೇಲೆ.. ಇಹದ ಚಿಂತೆ ಬೇಡವಾದಮೇಲೆ, ಹಗಲು ಉರುಳಿತು ಹಕ್ಕಿಗಳೆಲ್ಲ ಅವಸವಸರದಿ ಗೂಡು ಸೇರಿದವು ತಾನು ಎದ್ದು ಹೊರಟಳು ನೆನ್ನೆಯ ಚಿಂತೆಗಳು ನಾಳೆಗೆ ಬಿಟ್ಟು ಮರುಳಿನ ಮೇಲೆ ಬರೆದ ಅವನ ಹೆಸರಿಗೆ ಸಿಹಿ ಮುತ್ತೊಂದನಿಟ್ಟು.
ಹೇಳಿ ಬಿಡಲೇ ಒಮ್ಮೆ..
ನನಗೆ ಪ್ರೀತಿಯಾಗಿದೆ ಎಂದು..
ಕೂಗಿ ಕರೆಯಲೇ..
ನಿನ್ನ ಹೆಸರ ಮನದುಂಬಿ ಇಂದು..
ಜೋಪಾದವಾಗಿದ್ದ ಹೃದಯ ಜಾರುತಿದೆ ನಿನ್ನೆಡೆಗೆ..
ಈ ಅನುಭವ ಹೊಸದು ನನಗೆ..
ಬರಿ ತನುವಾಗಿದ್ದೆ ನಾನು
ನಿನ್ನ ಪರಿಚಯದ ಮೊದಲಿಗೆ..
ಮನಸ್ಸೆಂದೂ ಇರಲಿಲ್ಲ
ಯಾರ ಮೇಲೂ ಹೀಗೆ..
ನಿನ್ನ ದಾರಿಯ ಕಾಯುತಿರುವೆ ನಾನು..
ಬರುವೆಯ ಜೊತೆಗೆ ನೆರಳಂತೆ ನೀನು...
ಕಳೆದೋದವು ಹಲವು ದಿನಗಳು
ಮೂಲೆಯಲ್ಲಿದ್ದ ಲೇಖನಿಯೊಂದು ನನ್ನ ನೋಡಿ ನಕ್ಕಿತ್ತು
ಅರ್ಥವಾಗುತ್ತಿಲ್ಲ ಯಾಕಿರಬಹುದು ಈ ನಗು
ಕೆದಕಿ ನೋಡಲು ಭಯ, ಕಾರಣ ಗೊತ್ತಿರುವುದಲ್ಲವೇ...
ಹೇಳಲು ಏನು ತೋಚುತ್ತಿಲ್ಲ
ಬರೆಯಲು ಬೇರೆ ಪದಗಳಿಲ್ಲ
ಬರೆಯಲೇಬೇಕು ಏನಾದರೂ
ಆದರೂ ಏನಂತ ಬರೆಯಲಿ ಪುಸ್ತಕದ ಪುಟಗಳಲಿ .....
ಯೋಚನೆಗಳು ನೂರಾರು, ಅವೆಲ್ಲವ ಬಾಡಿಗೆ ಕೊಟ್ಟಿರುವೆ
ಇಂದು ನಿರಾಳವಾಗಿ ಬರೆಯಬೇಕೇಂದಿರುವೆ ಅವೆಷ್ಟು ಸಾಲುಗಳನು
ಖುಷಿಯಿಂದೇನೋ ಪುಸ್ತಕವನ್ನೇನೋ ಎತ್ತಿಕೊಂಡೆ
ಆದರೆ ಮೂಲೆಯಲ್ಲಿಟ್ಟ ಲೇಖನಿಯು ತನ್ನ ಕಾಯಕವನ್ನೇ ನಿಲ್ಲಿಸಿತ್ತು..