ಒಬ್ಬಂಟಿಯ ಜೋಡಿ ಕಣ್ಣ ಹನಿಗಳು
ಕೆನ್ನೆಗಿಳಿದು ಬರೆದಿವೆ
ಅಕ್ಷರವಾಗದ ಆರ್ತ ಅರ್ಥದ ನೋವಿನ ಓಲೆ
ತಲುಪಲಾರದ ವಿಳಾಸಕ್ಕೆ
ರಾತ್ರಿಯ ಕತ್ತಲು ಹಗಲಿನ ಬೆಳಕು
ತಬ್ಬಿಕೊಂಡಂತಿದೆ ಒಂದನ್ನೊಂದು
ಇಳಿಸಂಜೆಯ ಹೊತ್ತಲಿ
ನೀ ಎಲ್ಲಿ ಹೋದೆಯೋ
ನೆನಪುಗಳಲ್ಲಾದರೂ ಹುಡುಕಿಕೊಳ್ಳೋಣವೆಂದರೆ
ಹೋಗುವ ಮುನ್ನ ನೆನಪುಗಳ ಕಣ್ಣು ಕಿತ್ತು ಹೋದೆ
ಹೋದವಳ ಮನಸು ಹಗುರ
ಉಳಿದವನ ಬದುಕು ಹೆಣಭಾರ
ಯಾವತ್ತೂ ಈ ಬದುಕಿಗೆ ಎದಿರಾಗಬೇಡ
ಎದಿರಾದರೂ ನಗಬೇಡ
ನಿನ್ನ ನಗುವಿನ ಅರ್ಥ ಹುಡುಕುವ ಶಬ್ಧಕೋಶ
ನನ್ನ ಬದುಕಲ್ಲಿ ಉಳಿದಿಲ್ಲ !
- ಜೀವ ಮುಳ್ಳೂರು
8970922703
ನನ್ನ ಖಾಲಿ ತಲೆಯಲ್ಲಿ,
ಹೊಟ್ಟೆ ತುಂಬಿಸದ ಕವನ
ಗಪ್ ಚಿಪ್ ಮಲಗಿದೆ
ನನ್ನ ಲಬ್-ಡಬ್ ಸೌಂಡ್ ಮಾಡುವ ಹಾರ್ಟಲ್ಲಿ,
ಜೇಬು ತುಂಬಿಸದ ಕವನ
ಉಸಿರು ಬಿಗಿ ಹಿಡಿದು ಮೌನವಾಗಿ ಮಲಗಿದೆ
ನನ್ನ ದೃಷ್ಟಿ ಹೀನ ಕಣ್ಣುಗಳಿಗೆ,
ದಾರಿ ತೋರಿಸದ ಕವನ
ಕತ್ತಲೆ ಜೊತೆ ಕೈ ಕೈ ಜೋಡಿಸಿದೆ.
ವಸಂತರಾಜನಿಗೆ ಕೈ ಕೊಟ್ಟ ಕೋಗಿಲೆಯಂತೆ
ಹುಣ್ಣಿಮೆ ರಾತ್ರಿಗೆ ಕೈ ಕೊಟ್ಟ ಚಂದಿರನಂತೆ
ನನ್ನ ಕವನ....ನನ್ನ ಕವನ....ಕವನ...ಕವನ..ಕ.....
ಕವಣಿಗೆ ಕಲ್ಲಾದೆವು
ಬಿಲ್ಲಿಗೆ ಬಾಣವಾದೆವು
ತೋಪಿಗೆ ಸಿಡಿಗುಂಡಾದೆವು
ಬೆಂಕಿ ಕಡ್ಡಿಗೆ ಉರಿಮದ್ದಾದೆವು
ಗುಲಾಬಿ ಹೂ ಗಿಡಮರಕೆ ಮುಳ್ಳಾದೆವು
ನಿಮ್ಮ ಕಾಲಿಗೆ ಚಪ್ಪಲಿಯಾದೆವು
ಯಾಕೆಂದರೆ.....
ನಾವು ಮುಗ್ಧರು.... ಮುಗ್ಧರು....
ಓ..ಸೂರ್ಯ,
ನೀ ಬಂದು ನಮ್ಮ ಮನೆಯ ಒಲೆಯೊಳಗೆ ಕುಳಿತುಬಿಡು,
ನನ್ನ ಅವ್ವ ರೊಟ್ಟಿ ಬೇಯಿಸಿ ಬಿಡುವಳು ನಿನ್ನ ನೆತ್ತಿಯ ಮೇಲಿಟ್ಟು.
ಓ..ಸೂರ್ಯ,
ನೀ ಬಂದು ಸ್ಮಶಾನದಲಿ ಚಿತೆಯಾಗು
ನಮ್ಮವರು ಹೆಣ ಸುಟ್ಟು ಬಿಡು
ಅವರ ಮೈಯೊಳಗಿನ ರಕ್ತಗಾಯ ಅಳಿಸಿಬಿಡು.
ಓ... ನನ್ನ ಜನಗಳೆ,
ಸತ್ತು ಸಮಾಧಿ ಸೇರಿದ ನಮ್ಮವರ ಹೆಣಗಳನು
ಕಿತ್ತು ಹೊರಗೆ ಎಸೆಯಿರಿ
ಹದ್ದು ಕಾಗೆಗಳು ಹಸಿದು ಕುಳಿತಿವೆ
ತಿಂದು ತೇಗಲಿ...
ಓ... ಚಂದ್ರ,
ನೀ ಬಂದು ನಮ್ಮ ಹರಕು ಮುರುಕು ಹಂಚಿನ ಗುಡಿಸಲು ಮೇಲೆ ಕುಳಿತುಬಿಡು
ನೀ... ತಂಪಿಗೆ ಹೆಸರಂತೆ...
ಕಣ್ಣು ಮುಚ್ಚಿ ಕಣಸು ಕಾಣುವೆ ನಾ,
ನನಗೆ ಉಳಿದಿರುವುದೊಂದೆ ನಾ ಬಡವ.....
ಇತಿಹಾಸದ ಬೆನ್ನೇರಿ ಅರಸುತ್ತಾ ಅಲೆದೆ,
ಒಂದಿಷ್ಟು ಸಿಗಲಿಲ್ಲ ಅವಶೇಷ...
ಅರಮನೆಗೆ:-
ಕಲ್ಲು ಹೊತ್ತು ನೆತ್ತಿ ನೆಗ್ಗಿಸಿಕೊಂಡವರ,
ಕಲ್ಲು ಕಟೆದವರ,ಗಾರೆ ಕಲಿಸಿದವರ,
ಗೋಡೆ ಕಟ್ಟಿದವರ, ಬೆನ್ನು ಬಾಗಿಸಿಕೊಂಡವರ...
ರಂಗು.. ರಂಗಿನ ಕಥೆಗಳು...
ಇತಿಹಾಸದ ಬೆನ್ನೇರಿ ಅರಸುತ್ತಾ ಅಲೆದರೆ,
ಒಂದಿಷ್ಟು ಸಿಗಲಿಲ್ಲ ಅವಶೇಷ...
ಯುದ್ಧದೊಳಗೆ:-
ಖಡ್ಗ ಝಳಪಿಳಿಸಿದವರ,
ಬಿಲ್ಲಿಗೆ ಬಾಣ ಹೂಡಿದವರ,
ಆನೆಗೆ ಅಂಕುಶ ಚುಚ್ಚಿದವರ,
ಕುದುರೆಗೆ ನಾಲು ಬಡೆದವರ,
ಖಡ್ಗಕ್ಕೆ ರುಂಡ ಕೊಟ್ಟವರ,
ನೆಲಕ್ಕೆ ರಕ್ತ ಕೋಡಿಯಾದವರ....
ರಂಗು ರಂಗಿನ ಕಥೆಗಳು...