ಅಬ್ಬರದ ಭಾಷಣದಿಂದ
ದೇಶದ ದಿಶೆ ಬದಲಿಸಬಹುದು
ಹಸಿವಿಗೆ ಅನ್ನವೇ ಬೇಕು ..
—
ಅವನು ಮಸೀದಿಯೊಳಗೆ,
ಇವನು ಮಂದಿರದೊಳಗೆ,
ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ
ಬೇಡುತ್ತಲೇ ಇದ್ದರು..
—
ಮಗ ಬೈಕಿನ ಮೊದಲನೇ
ರೈಡಿಗೆ ಕೂಗಿ ಕರೆಯುತ್ತಿದ್ದ;
ಅಪ್ಪ ಅದರ ಸಾಲದ ಮೊದಲಿನ
ಕಂತಿನ ಲೆಕ್ಕಾಚಾರದಲ್ಲಿ ಮೈಮರೆತಿದ್ದ;
—
ಮೊದಲ ರಾತ್ರಿಯ ಮರುದಿನ
ಈರುಳ್ಳಿಯ ಒಂದೊಂದೇ
ಸಿಪ್ಪೆ ತೆಗೆಯುತ್ತಿದ್ದ ಹುಡುಗಿ
ಒಳಗೊಳಗೇ ಲಜ್ಜೆಯಿಂದ ಕಂಪಿಸುತ್ತಿದ್ದಳು;
—
ಬಟ್ಟೆ ತೊಟ್ಟು ಸಭ್ಯ
ಎನಿಸಿಕೊಂಡ ಮನುಷ್ಯನ
ಪರಮಾನಂದಗಳು
ಬೆತ್ತಲೆ ದೇಹವನ್ನು ಬೇಡುತ್ತದೆ;
ನಿನ್ನ ನೆನಪಿನಿಂದ
ಹುಟ್ಟಿದ ಈ
ಕವನ
ನಿನ್ನದೋ
ನನ್ನದೋ ..
ಗೊಂದಲವಿದೆ!
———
ನಿನ್ನ ಎದೆಯಾಳದ
ಹಂದರಕ್ಕೆ
ಈಜು ಬಾರದೆ
ಇಳಿದು
ದಿಕ್ಕಾಪಾಲಾದ
ನನ್ನ ಸ್ಥಿತಿಗೆ
ಪರಿಭ್ರಮಿಸುತ್ತೇನೆ…
ಕೆಲವೊಮ್ಮೆ
ಸಂಭ್ರಮಿಸುತ್ತೇನೆ..!
———
ನೀ ನನಗೆ
ನಷ್ಟವಾಗಬಹುದು ..
ಎಂದಲ್ಲ..
ನಾನಿನಗೆ
ನಷ್ಟವಾದರೆ
ನನ್ನಷ್ಟು ನಿನ್ನ
ಯಾರು ತಾನೇ
ಪ್ರೀತಿ ಮಾಡಿಯಾರು
ಎಂಬ ಭಯವಿದೆ….!
———
ನಿನ್ನೊಲುಮೆಯ
ರಾಗವನ್ನು
ಪದಗಳಲ್ಲಿ
ಕಟ್ಟಿ ಹಾಕುವ
ವ್ಯರ್ಥ ಪ್ರಯತ್ನ
ಈ ಕವನ
———
ನಿನ್ನ ಕಾಡುವ
ನೆನಪುಗಳಿಗೆ
ಲಗಾಮು ಹಾಕುವ
ಪ್ರಯತ್ನದಲ್ಲಿ
ಪ್ರತೀ ಬಾರಿ
ಸೋಲುತ್ತಿದ್ದೇನೆ..
———
ಎನ್ನ ಎಡ ಬಲದೊಳಗೆ ವೈರಿಗಳಿರ್ದರೇನು
ಹರಿತವಾದ ಆಯುಧದಾರಿಯು ಅವರಾದರೇನು
ಕಡುವೈರಿಯ ಹಗೆತನವು ನಿನ್ನ ಮುಂದೆ ನಿಲ್ಲಲಾದೀತೆ? ಶ್ರೀ ಹರಿಯೆ ನಿನ್ನ ಅಭಯ ಹಸ್ತವಿರ್ದೊಡೆ ಹಾಲಾಹಲವು ಅಮೃತದ ಕಳಶವಾದೀತು...