ಹೊರಗೆ ಸುರಿವ ಧೋ ಮಳೆ
ಒಳಗೆ ಹರಿಯಲಿಲ್ಲ ಪದಗಳ ಹೊಳೆ
ಎಷ್ಟು ಮುಳುಗಿದರೂ ಕಲ್ಪನಾ ಬಾವಿಯೊಳಗೆ
ತುಂಬುತ್ತಲೇ ಇಲ್ಲ ಕವನದ ಕೊಡ
ಬರಿದೇ ತುಳುಕಾಡಿದೆ, ಅದಕ್ಕೇನೋ ಜಡ!
ಮಿಂಚ ಬೆಳಕಿಗೆ ಹೊಳೆದ ಬೆಟ್ಟ ಸಾಲು
ಆದರೂ ಹೊಳೆದಿಲ್ಲ ಒಂದಾದರೂ ಕವನ ಸಾಲು
ಮಳೆ ತೊಳೆಯಿತು ಇಳೆಯ ಕೊಳೆ
ಕವಿ ಗೀಚಿ ಗೀಚಿ ಸಾಹಿತ್ಯದ ಕೊಲೆ
ಮಳೆಯ ಹೊಡೆತಕ್ಕೆ ತುಡಿವ ಹೃದಯದ ಗೋಳು
ಪದಕ್ಕೆ ತಡಕಾಡಿ ಸತ್ತ ಕವನವಿದು
ಕವಿಯ ನಿರಂತರ ಸೋಲು.
ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ?
ಗುಂಡ: ಬಿಜಾಪುರದಲ್ಲಿ ಇದೆ.
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ..
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ?
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ತಿಳಿಯೋಲ್ಲ ಸಾರ್.. ಅದಕ್ಕೆ.
ಕವಲು ಹಾದಿ
——————
ಧುತ್ತೆಂದು ಎದುರಾದದ್ದು ಕವಲು ಹಾದಿ
ಮುಂದೇನು?
ಎಡಕ್ಕೋ ಬಲಕ್ಕೋ
ಯಾವುದು ಸುಗಮ
ಯಾವುದು ದುರ್ಗಮ
ರಾಶಿ ಫಲ ಏನನ್ನುತ್ತೆ?
ಅವರಿವರು ಏನಂತಾರೆ?
ಟಾಸ್ ಮಾಡೋಣವೇ?
ಆದದ್ದಾಗಲಿ ಬಲಕ್ಕೆ ಹೋದರಾಯಿತು.
ಸರಿ ಹೋಗದಿರೆ...
ಹಿಂದೆ ಬಂದರಾಯಿತು.
ನಡೆ.. ನಡೆ..ನಡೆ..
ಅರೆರೆ ಈಕಡೆ ಬರಬಾರದಿತ್ತೇನೋ!
ಹಿಂದಿರುಗಲೇ?
ತುಂಬಾ ಮುಂದೆ ಬಂದಾಯ್ತಲ್ಲ!
ಮತ್ತೆ
ಧುತ್ತೆಂದು ಎದುರಾದದ್ದು ಮತ್ತೊಂದು ಕವಲು ಹಾದಿ.
ಇಡೀ ಜೀವನ ಕವಲುಕವಲುಗಳ ಸರಪಳಿ.
ನಿನ್ನೆಗಳನ್ನು ಮರೆತರೆ
ಇಂದೂ ಮುಂದೂ ಸಂತಸ.
ಇಲ್ಲವೇ ಕೊರಳ ಸುತ್ತ ಸರಪಳಿ.
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ.
ಅಗಾಧವಾದ ನೇಸರ
ಅಪಾರವಾದ ಕಡಲು
ವಿಶಾಲವಾದ ನೆಲ
ಹೊಸಾ ಬೆಳಕು
ಅಲೆಯೇಳಿಸುವ ಗಾಳಿ
ಬಗೆಬಗೆಯ ಗಿಡಮರ
ನೀರಲ್ಲಿ ನೆಲದಲ್ಲಿ ಆಗಸದಲ್ಲಿ
ಎಲ್ಲೆಲ್ಲೂ ತರತರದ ಜೀವ
ನೋಡಲು ಕಣ್ಣು ...
ಅಬ್ಬಾ ಎಂತಹ ಭಾಗ್ಯ!
ಇವಕ್ಕೂ ಮಿಗಿಲಾಗಿ
ಕಾಣಿಸದ ಶಕ್ತಿ ತರಂಗಗಳು
ಇಡೀ ಬ್ರಹ್ಮಾಂಡವನ್ನೇ ಸುತ್ತಿಬರುವ ಮನಸ್ಸು
ಗೊತ್ತಿರದ ನಾಳೆಯನ್ನು
ರೂಪಿಸುವ ಈ ಹೊತ್ತು
ಅಬ್ಬಾ ಎಂತಹ ಭಾಗ್ಯ!