ಆಸೆ
*೧.ಆಸೆ*
ಉಕ್ಕುವ ಸಾಗರವ ಸೇರುವ ತವಕದಲಿ
ಹರಿಯುತ್ತಿದ್ದಾಳೆ ತನ್ನೆಲ್ಲ ಆಸೆಗಳ ಜೊತೆಯಲ್ಲಿ
ಹಸಿರುಗಳ ನಡುವಲ್ಲಿ ತನ್ನದೇ ದಾರಿಯಲ್ಲಿ
ಸಾಗುತಿಹಳು ಬೆಟ್ಟ ಗುಡ್ಡದ ಕಣಿವೆಯಲಿ!
ಬರಡು ಭೂಮಿಯನ್ನು ಸ್ಪರ್ಶಿಸಿ
ಬಳಲಿದ ಜೀವಗಳಿಗೆ ತಂಪೆರೆದು
ಸೋತ ಹೃದಯಗಳಿಗೆ ಮುದನೀಡಿ
ಧುಮುಕುತ್ತಿದ್ದಾಳೆ ಶರವೇಗದಲಿ ತನ್ನಿನಿಯನ ಸೇರಲು!
ಜುಳುಜುಳು ನಾದದಲಿ ಸಂಗೀತವ ಗುನುಗುತ
ಅಂಕುಡೊಂಕಿನ ದಾರಿಯಲಿ ನರ್ತನವ ಮಾಡುತ
ನಿಸರ್ಗದ ಸೊಬಗಿನಲಿ ತಾನು ಒಂದಾಗುತ್ತ
ಕಾಣಿಸುತ್ತಿರುವಳು ಕಣ್ಣು ಕೋರೈಸುವಂತೆ!
ಜಲಚರ ಜೀವಿಗಳನ್ನು ತನ್ನಲ್ಲೇ ಹೊತ್ತುಕೊಂಡು
ಬೆಳದಿಂಗಳ ರಾತ್ರಿಯಲ್ಲಿ, ನಿಶ್ಶಬ್ಧದ ಮಡಿಲಿನಲ್ಲಿ
ಚುಕ್ಕಿ ಚಂದ್ರಮರ ಸಾಕ್ಷಿಯಾಗಿ
ಸಾಗರವ ಸೇರಿದಳು ತುಸುನಾಚುತಲಿ!
ಪ್ರಿಯಾಂಕ✍
- ಪ್ರಿಯಾಂಕ
05 Dec 2017, 09:55 pm
Download App from Playstore: