ತಲೆಗೂದಲ ಜಲಪಾತ !

ಮೂಕ ವಿಸ್ಮಿತನಾದೆನು ಚೆಲುವೆ
ನಿನ್ನ ತಲೆಗೂದಲ ಜಲಪಾತವನು ಕಂಡು,
ದುಮ್ಮಿಕ್ಕಿರುವುದಲ್ಲೇ ಹುಡುಗಿ
ಬಾನಿನಿಂದ ಕರಿ ಮೇಘಗಳ ಹಿಂಡು.

ಎಷ್ಟು ತಪವ ಮಾಡಿ ಪಡೆದೆಯೋ ನೀನು
ಸೊಂಪಾದ ಗುಂಗುರು ತಲೆಗೂದಲನ್ನು,
ದೃಷ್ಟಿ ತಾಗಿತೋ ಏನೋ ನಾನರಿಯೆ
ಹೊರಳಿಸಲಾರೆ ಇನ್ನೆಲ್ಲಿಗೂ ನನ್ನ ಕಣ್ಣು.

ಕಪ್ಪು ಕೂದಲ ರಾಶಿಯ ನಡುವೆ
ಒಪ್ಪವಾದ ಚಂದ್ರ ಮೊಗದ ಬೀಡೇ?
ಬೆಪ್ಪಾದೇನೋ ಒಲವೇ,
ಕಳೆದೋಯ್ತು ಮನಸು ಕೂದಲ ಕಾಡಿನ ನಡುವೆ..

ಬೆಟ್ಟದ ಮೇಲಿಂದ ಧುಮುಕಿ ಭೋರ್ಗರೆದು
ಗಿರಿ ಕಂದಕಗಳಲಿ ತೂರಿ ಅಬ್ಬರಿಸಿದಂತೆ
ಅನಾಮಿಕ ಬಿಳಿ ನೀರ ತೊರೆ,
ಬೈತಲೆಯ ಗುಡ್ಡದಿಂದಿಳಿದು ಗಾಳಿಗೆ..
ಹುಬ್ಬ ತೀಡಿ,
ಕಾಡಿಗೆ ಕಂಗಳ ಕೊಂಚ ಮರೆ ಮಾಡಿ ನಾಚಿಸಿ
ಹಾಲ್ಗೆನ್ನೆಯ ತುಸುವೇ ಮುತ್ತಿಟ್ಟು ರಂಗೇರಿಸಿ
ಕಿವಿಗಳಲಿ ಪ್ರೇಮದ ನುಡಿಗಳನು ಉಸುರಿ,
ಹೊಂಗನಸನು ಹೊಸೆದ ಹೊಸ ಪ್ರೇಮಿಯಂತೆ
ಕತ್ತಿನ ಸುತ್ತ ಒತ್ತೊತ್ತಾಗಿ ಸುತ್ತಿ ಬಳಸಿ,
ನವಿರಾಗಿ ತೀಡಿ ತೊನೆದು ಮತ್ತೆಲ್ಲೋ
ಮೌನವಾಗಿ ಇಳಿದು..

ಹದಿ ಹರೆಯದ ದೇಹದೈಸಿರಿ ಬೆಟ್ಟಗಳನು
ನಾಚಿಕೆಯಿಂದಲೋ ಏನೋ ಮರೆಯಾಗಿಸಿ,
ಮೌನ ಕಣಿವೆಗಳಲಿ ತೊನೆದಾಡಿಹುದು ಒಲವೇ..
ನಿನ್ನ ತಲೆಗೂದಲ ಕಪ್ಪು ಅಸ್ತವೆಸ್ತ ಬಣವೆ.

ಒಮ್ಮೆ ನನ್ನ ಕೈ ಬೆರಳುಗಳಿಗೆ
ಅವಕಾಶವನು ಕೊಡು,
ಆ ನಿನ್ನ ಸೊಂಪಾದ ಕೂದಲ ರಾಶಿಯ ನಡುವೆ
ಚಿಕ್ಕದೊಂದು ಪ್ರೀತಿಯ ಗೂಡನ್ನು
ಈಗಲೇ ಕಟ್ಟಿ ಬಿಡುವೆ.

- ಶ್ರೀಗೋ.

11 Dec 2017, 02:01 pm
Download App from Playstore: