ಸಲಹೆ ಗೆಳತಿ,..

ಮನದ ಅಂಗಳದಲ್ಲಿ ಸದಾ ಗೆಜ್ಜೆ ತೊಟ್ಟು
ನಡೆದಾಡದಿರು ಒಡತಿ,
ನೊಂದೀತು ನಿನ್ನ ಹಾಲ್ಗೆನೆಯ ಮೃದು ಪಾದ,
ನನ್ನ ಒರಟು ಭಾವನೆಗಳು ಒತ್ತಿ.

ಕಣ್ಣಲ್ಲಿ ಕಣ್ಣಿಟ್ಟು ನೀ ಹಾಗೆ
ನೋಡದಿರು ನನ್ನೊಳಗೆ,
ಸಿಕ್ಕಿ ಹೋದೀತು ಎನ್ನ ಮನಕೆ
ನಿನ್ನ ಕಣ್ಣೀರ ಲೆಕ್ಕ.

ರಾತ್ರಿ ಕನಸಲಿ ಬಂದು
ಕಳ್ಳಾಟವಾಡದಿರು,
ಹೃದಯ ಠಾಣೆಯಲ್ಲಿ ನಾ
ದೂರು ಕೊಡುವೆ.

ಹಿಡಿದ ಕೈಯನು ಒದರಿ
ನೀ ದೂರ ಓಡದಿರು..
ಹಿಂದೆಯೇ ಓಡಿ ಬಂದು
ನಾ ತಬ್ಬಿ ಬಿಡುವೆ !..

ಕೆಂದುಟಿಯ ಅಂಚಿನಲ್ಲಿ
ಹೊಂಬಾಳೆಯನು ತಂದು
ಕಿರಿದೊಂದು ಗುಡಿಸಲನು ಕಟ್ಟಲೇನು ?
ತುಟಿ ಸೇರೋ ಸಂದಿಯಲಿ
ಪಟುವಾಗಿ ನಾ ಕೂತು
ತುಟಿ ಬಣ್ಣಗಳ ಕವನ ಬರೆಯಲೇನು ?

- ಶ್ರೀಗೋ.

11 Dec 2017, 06:58 pm
Download App from Playstore: