ತಿರುಗಿ ನೋಡಲಾರದವ..
ಚೆಂದದ ಪ್ರೀತಿಯರಮನೆಯ ಎದೆಯೊಳಗೆ ಕಟ್ಟಿದವ ನೀನು
ಹರೆಯದ ಕನಸುಗಳ ಮೂಟೆಗಳ ಹೊತ್ತು ತಂದವ ನೀನು
ಇರುಳ ಚಂದಮನ ಬೆಳಕು ಸಾಟಿಯಲ್ಲ ನಿನ್ನ ಪ್ರೀತಿಗೆಂದು
ಈ ಕತ್ತಲೊಳಗೆ ನನ್ನ ಒಂಟಿ ಮಾಡಿ ಕಾಣದಾದವ ನೀನು
ಮುಂಗುರುಳ ಮುತ್ತಿಗೆ ರಂಗೇರಿದ ಕೆನ್ನೆಯ ಕಂಡು ಆ ರಂಗಿಗೊಡೆಯ
ನಾನೆಂದು ಮುಂಗುರುಳ ಗದರಿಸಿ ಸರಿಸಿ ಮರೆಯಾದವ ನೀನು
ಕೈ ಕೈ ಬೆಸೆದು, ಬಾಳ ಕನಸುಗಳ ಜೊತೆಗೆ ಹೆಗ್ಗಿಲ್ಲದೆ ಹೆಣೆದು
ನೆನಪುಗಳ ಉಡುಗೊರೆ ಕೊಟ್ಟು ಅನಾಮಿಕನಾದವ ನೀನು
ನಗುವಾಗ ಕಾಣುವ ಕಣ್ಬೆಳಕಿಗಾಗಿ ಕಾಯುವ ಪ್ರೇಮಿ ಎಂದು
ಕಣ್ಣೀರ ಕಡಲೊಳಗೆ ಈಜಲಾಗದ ನನ್ನ ನೂಕಿ ಹೋದವ ನೀನು
ಹೃದಯದ ಕದವ ಮಾತಿನಲೆ ತಟ್ಟಿ ತೆರೆದು ಒಳ ಸೇರಿ
ಮಾತಿನಲೆ ಕೊಂದು, ನಗುತಲೇ ಹೊರ ನಡೆದವ ನೀನು
ಒಬ್ಬಂಟಿಯಾಗಿ ನಾ ಕಣ್ಣ ಹನಿಗಳ ಪ್ರೇಮಿಸಿ, ರಮಿಸಿ
ಮುದ್ದಾಡಿದರೂ ಈ ಕಾವ್ಯಳ ತಿರುಗಿ ನೋಡದಾಗಿರುವವ ನೀನು
- ಶ್ರೀಕಾವ್ಯ
19 Dec 2017, 01:32 pm
Download App from Playstore: