ನಾನರಿಯದಾದೆನವ್ವ!
ತುಂತುರು ಮಳೆಗೆ
ಚುಂಬಿಸಿ ಬೀಸೋ ಗಾಳಿಗೆ
ಅಂಜದೆ ಬಾಳುವ ಆಲದಮರ
ನಾನೆಂದುಕೊಂಡಿದ್ದೆನವ್ವ !
ಖಡ್ಗದಿ ತುಂಡಾಗದ
ಬಡ್ಗೀಲಿ ಬಗ್ಗದ
ಕುಗ್ಗದ- ಬಗ್ಗದ ಲೋಹ
ನಾನೆಂದುಕೊಂಡಿದ್ದೆನವ್ವ!
ನಿಲ್ಲದೆ ಓಡುವ ನದಿಯಂತೆ
ಝಲ್ಲೆನಿಸುವ ಸುನಾಮಿಯಂತೆ
ಎಲ್ಲವ ಎದುರಿಸುವ ಧೀರೆ
ನಾನೆಂದುಕೊಂಡಿದ್ದೆನವ್ವ!
ಸುಂದರವಾದ ಬಳ್ಳಿಯ
ಸುಂದರವಾದ ಕಸುಮವಾಗಿ
ಸುಂದರ ನಿನ್ನ ಪಾದಬೆಳಗೋ ಹೂ
ನಾನೆಂದುಕೊಂಡಿದ್ದೆನವ್ವ!
ಅಡಿಗಡಿಗೆ ಎಡವುತ
ಅಡಿಗಡಿಗೆ ಕಂಬನಿ ಕರೆಯುತ
ಪಡಿಸಣಿ ಗೇಮೆಯು
ನನದಾಯಿತಲ್ಲವ್ವ!
ಕಾಣದ ನಿನಗಾಗಿ
ಕಾಣದ ದಾರಿಯಲಿ
ಕಣ್ಮುಚ್ಚಿ ಕರೆಯೋ
ವೇದನೆ ನನದಾಯಿತಲ್ಲವ್ವ!
ಎಂತಿರುವೆ ನೀನಾನರಿಯೆ
ಎಂದಿಲ್ಲಿ ಬರುವೆ ತಿಳಿಯೆ
ಅಂದಿಗಾಗಿ ಬಾಳುವಾಸೆ
ನನ್ನಲ್ಲಿರುವುದವ್ವ!
ನಿನಗಂದು ಒಡ್ಡಿದೆ ಆಮಿಷವ
ನನಗಾಗಿ ನೀಡೆಂದು ವಿದ್ಯೆಯ
ಮೌನವಾಗಿ ಮರೆಯಾದೆ ಏಕೋ
ನಾನರಿಯದಾದೆನವ್ವ!
ಎಲ್ಲವ ಗೆಲ್ಲುವ ಉಮ್ಮಸ್ಸು
ಬಲ್ಲವರಾರು ನಿನ್ನ ವರ್ಚಸ್ಸು
ಅಲ್ಲಗಳೆವರು ನನ್ನವರೆಂದು
ನಾನರಿಯದಾದೆನವ್ವ!
ಸಂಸಾರದಲ್ಲಿ ಬಂದಿಯಾದೆನು
ಸಂಸಿದ್ಧಿಗಾಗಿ ಪರಿತಪಿಸಿದೆನು
ಸಂಪೂರ್ಣವಾಗಿ ಮಣ್ಣಾಗುವೆನೆಂದು
ನಾನರಿಯದಾದೆನವ್ವ!
ಶಾರಧ
- ಶಕುಂತಲಾ
20 Dec 2017, 10:32 pm
Download App from Playstore: