ಲಾಲಿಹಾಡು

ಅಮ್ಮ ಮತ್ತೆ ಮತ್ತೆ ಏಕೋ ನೆನಪಾಗುತಿದೆ ಲಾಲಿಹಾಡು
ನಿನ್ನ ಮಡಿಲಲಿ‌ ಮಲಗಿ ಕೇಳಬೇಕೆನಿಸುತಿದೆ ಲಾಲಿಹಾಡು

ಸ್ವರ ಅಪಸ್ವರ ಏನನ್ನೂ ತಿಳಿಯದೆ ನೀ ಹಾಡಿದರೂ ಹಾಡು
ಅದಕ್ಕೆ ಸಾಟಿ ಯಾವುದೂ ಸಿಗದೆ ಮನಸ ಕಾಡುತಿದೆ ಲಾಲಿಹಾಡು

ಚಡಪಡಿಸಲು ಸಾವಿರ ನೋವುಗಳೇ ಇದ್ದರು ಮನಸಲಿ
ನೀ ತಲೆ ಸವರಿ ಹಾಡಿದರೆ ನೋವು ಕೂಡ ಮರೆಸುತದೆ ಲಾಲಿಹಾಡು

ಕಂದನಾಗುವಾಸೆಯಾಗಿ ಎನಗೆ ಮತ್ತೊಮ್ಮೆ ನಿನ್ನ ಮಡಿಲೊಳಗೆ
ಬೇಕು ಬೇಡಗಳ ಅರಿವಿರದೆ ನಗುವಾಸೆಯಾಗಿ ನೆನಪಾಗಿದೆ ಲಾಲಿಹಾಡು

ಪ್ರಪಂಚದಲೇ ತಾಯಿ ಮಡಿಲು, ಲಾಲಿಹಾಡಿಗಿಂತ ಸುಖವಿರಬಹುದೇನೊ
ಆದರೆ ಬೇರೇನು ಬೇಡವಾಗಿದೆ, ಮನಸು ಗುನುಗುತ್ತಿದೆ ಲಾಲಿಹಾಡು

ಮತ್ತೆ ಸೇರುವೆ ಮಗುವಂತೆ ನಿನ್ನ ಪುಟ್ಟ ಮಡಿಲೊಳಗೆ
ಈ ಕಾವ್ಯಳ ಮುದ್ದಿಸಿ, ನಗಿಸಿ ನೀನು ಹಾಡಲಾಗುವುದೆ ಲಾಲಿಹಾಡು

- ಶ್ರೀಕಾವ್ಯ

22 Dec 2017, 01:19 am
Download App from Playstore: