ನೀಲಿ ಉಡುಗೆಯ ವಯ್ಯಾರಿ
ನೀಲಿ ಉಡುಗೆಯನು ತೊಟ್ಟು
ನಡೆದಿಹಳೋ ಹುಡುಗಿ
ಒಂದೊಂದೇ ಲಗು ಹೆಜ್ಜೆಗಳನು ಇಟ್ಟು,
ಒನಪು ವಯ್ಯಾರದ ನಡಿಗೆ
ಹೆರಳು ಹರಡಿದೆ ಕೆರಳಿ
ಹುರಿ ಮಯ್ಯ ಬೆನ್ನ ತುಂಬಾ
ಜಿಪುಣ ಗ್ರೇಸರ ಶಿಲ್ಪಿಯೊಬ್ಬ
ಕಡೆದನೇನೋ ಸಣ್ಣ ಸೊಂಟ
ತಪ್ಪನರಿತು ತಿದ್ದಿಕೊಂಡ
ಕಟಿಯ ಕೆಳಗೆ ಹಿಂಭಾರ ತಂದ.
ಹರೆಯ ಸೊಕ್ಕಿ, ಪ್ರಣಯ ಉಕ್ಕಿ
ತೃಪ್ತಗೊಂಡ ಸಿಂಹಿಣಿಯೊಂದು
ಆಗಷ್ಟೇ ಉಂಡು, ತುಸು ಗರ್ವವನು ಕೊಂಡು
ನಡೆದಂತೆ ಕಾಣುತಿಹುದು
ನಲ್ಮೆಯರಸಿಯ ನಡಿಗೆಯಿಂದು.
ಏನೋ ಯೋಚನೆ,
ಎತ್ತಲೋ ಸೂಚನೆ
ಏನೇನು ಅರಸಿಹುದೋ ಈ ಚೆಲುವಿಯ ಚಿತ್ತ.
ಹಿಂದೆಯೇ ಇರುವೆನು,
ಜೊತೆಯಲೇ ಬರುವೆನು
ನನ್ನರಸಿ ನಡೆದು ಕರೆದುಕೊಂಡು ಹೋದತ್ತ !
- ಶ್ರೀಗೋ.
23 Dec 2017, 07:28 am
Download App from Playstore: