ಕುಳಿರ್ಗಾಳಿ
ಹೇಮಂತ ಋತುವಿನ ಧಾವಂತ ನೋಡಿರಿ
ಏನಂತ ಹೇಳಲಿ, ನಾನೆಂತ ನುಡಿಯಲಿ
ಹಾಸಿಗೆ ಬಿಟ್ಟೇಳಲು ಬಿಡದಿದು ಏಳಾದರು ಗಂಟೆ
ತುಂಟಿ ಹುಡುಗಿಯೊಬ್ಬಳು ಎಲ್ಲೆಲ್ಲೋ
ಕಚಗುಳಿಯ ಇಟ್ಟಂತೆ.
ತುಂಟ ಗಂಡ ಬರಸೆಳೆದುಕೊಂಡ
ಎಂದೋ ಮರೆತು ಬಿಟ್ಟಿದ್ದ ಹಳೆ ಹೆಂಡತಿಯನ್ನ,
ಹೊಸ ಪ್ರೇಮಿಯ ಮೈ ಬಿಸಿಯು ಸಾಲದು
ಚಳಿಯ ನೀಗಿ ಪುಳಕಿತಗೊಳಿಸಲು
ಯುವ ಮನಸುಗಳನ್ನ..
ಎಷ್ಟು ಹೊದ್ದು ಮಲಗಿದರೂ
ಮತ್ತಷ್ಟು ಒದ್ದು ಬರುತಿಹುದು,
ಯಾವುದೋ ಸಂದು ಗೊಂದುಗಳಲ್ಲಿ ತೂರಿ
ನಾನಿರುವೆನೆಂದು ಇರಿದು ಚಳಿಯ ಚೂರಿ
ಅಯ್ಯೋ ಇದೆಂಥ ಚೆಲ್ಲಾಟದ ಚಂದ್ರ ಚಕೋರಿ!
ರೈತ ಕಂಬಳಿ ಹೊದ್ದು ಹೊರಟ ಹೊಲಕೆ
ಚಳಿಗೆ ಹೆದರಿ ಕುಳಿತರೆ ಅದು ಬದುಕೇ ?
ತಲೆಯ ಕೆರೆದು ಬರೆಯ ಹೊರಟ ಕವಿಗೆ
ಚಳಿಯ ವರ್ಣನೆಗೆ ಹೊಸ ಪದಗಳ ಬಯಕೆ.
- ಶ್ರೀಗೋ.
24 Dec 2017, 07:39 am
Download App from Playstore: