ಒರತೆ
ಅಲ್ಲಿಂದ ಬಂದು
ಇಲ್ಲಿ ನೆಲೆ ನಿಂತಾಗ
ಅಪರಿಚಿತ ಮನಸ್ಸುಗಳ
ಪ್ರಶ್ನೆ ನೂರು
ಎಲ್ಲಿಂದಲೋ ಬಂದವನೆಂಬ
ಅವರ ಹಂಗಿನ ಭಾವ
ಹೊರ ಕಾಣದಿದ್ದರೂ
ಭೂದಿ ಮುಚ್ಚಿದ ಕೆಂಡ
ಗಂಟಿಲ್ಲದವನಿಗೆ ನಂಟಿನ ಭಯವೇನು ?
ಹರಡಿಕೊಳ್ಳುತ್ತಾ ಹೋದೆ
ಹರಕು ಮುರಕು ಸರಕು
ತಪ್ಪು ಸರಿಗಳ ಲೆಕ್ಕ ಪಕ್ಕಕ್ಕಿಟ್ಟು
ನಡು ನಡುವೆ ಬಿರುಗಾಳಿ
ಚಿತ್ತ ವಿಕಲರ ದಾಳಿ
ಬಯಸಿದ್ದು ಬೆಳಕು
ದೊರೆತ್ತದ್ದು ಬೆಂಕಿ
ಬಿಚ್ಚಿ ಹೋಗಿದೆ ಬದುಕು
ಕಟ್ಟಿದರೆ ಮುಂದೇನು ?
ಕಾಡುವ ಇರುಳಿನಲಿ
ಕರುಣೆಯ ಬೆಳಕರಸಿ
ಕಾಯುತ್ತ ಕುಳಿತೆ
ಕಳವಳಿಸಿ ಕನವರಿಸಿ
ಮನೆಯೊಳಗೆ ಬಂದವರು
ಮನದೊಳಗೂ ಬಂದರು
ಎದೆಯ ರಂಗಸ್ಥಳದಿ
ಕುಣಿದು ಕುಪ್ಪಳಿಸಿದರು
ಚಿತ್ತಾರ ಬಿಡಿಸಿದರು
ಚಿತ್ತಗೆಡಿಸಿದರು
ಕನಸ ನೆಟ್ಟರು ಹಲವರು
ಕಣ್ಣು ಕಿತ್ತರು ಕೆಲವರು
ಕಡೆಗೆಲ್ಲಾ ಮುಗಿದಂತೆ
ಹೊರಟೆ ಬಿಟ್ಟರು
ನಿರ್ಭಿಡೆಯ ಮನಸಿಗರು
ಬಯಕೆ ತಣಿದರೆ ಸಾಕು
ಬಸಿರು ಯಾರಿಗೆ ಬೇಕು
ಯಾವ ಹಿಡಿತಕ್ಕೂ ಸಿಗದ
ನುಣುಪು ಜಾರುಗರು
ಮುನಿದು ಕುಳಿತರೆ ನಾನು
ಸೃಷ್ಟಿ ನಿಲ್ಲುವುದೇ ತಾನೇ ?
ನಾಳೆಗೆ ಯಾರ ಹಂಗು ?
ಸತತ ತಿರುಗುವ ಚಕ್ರ
ಇಂದಿನದೇನೆ ಇರಲಿ
ಮುಂದಿನದೇ ಒಗಟು
ಹುಚ್ಚು ಹುರುಪಿನ ದೈರ್ಯ
ಹೊಸ ಬದುಕಿಗಡಿಪಾಯ
ಅಳಿದುಳಿದ ಕನಸೊಡನೆ
ನವರಂಗ ಪ್ರವೇಶ
ಇಲ್ಲಿ ಸಲ್ಲದವರು
ಅಲ್ಲಿಯೂ ಸಲ್ಲರು
ಹಿರಿಯರಾಡಿದ ಮಾತು
ಗಹಗಹಿಸುತ್ತು
ಸಂತೆಯೊಳಗಿದ್ದರೂ
ಕಾಡುವ ಒಂಟಿತನ
ಅಪ್ಪುವುದು ಯಾರನ್ನು ?
ಒಪ್ಪುವುದು ಏನನ್ನು ?
ಅವ್ಯಸ್ತ ಅಸ್ಪಷ್ಟ
ಕಲಸು ಮೇಲೋಗರ
ತಿರುತಿರುಗಿ ಮರಳಿದ್ದು
ಮತ್ತದೇ ಹಳೆಯ ಗೂಡು
ನಾನೇ ಕಟ್ಟಿದ್ದು ನನ್ನದೇ ಗೂಡು
ಸಂಬಂದ ಹಿಂದಿನಂತಿಲ್ಲ
ಸಡಿಲಗೊಂಡಿದೆ ಎಲ್ಲ
ನನ್ನೊಡನೆ ಇರಲೆಂದು
ನಾನೇ ತಂದಿರಿಸಿದ್ದು
ಅನ್ಯವೇನಲ್ಲ ನನ್ನ ಸಹ ಬಳಿಗಳೇ
ಅವುಗಳ ಪಾಲಿಗೀಗ
ನಾನೊಬ್ಬ ಆಕ್ರಮಿತ
ಮೇಲೆಷ್ಟು ಶಾಂತ
ಒಳಗೊಳಗೇ ಸಿಡಿತ
ಇಷ್ಟಾದರೂ ನಂಬಿಕೆ
ನನ್ನೊಳಗೆ ಸತ್ತಿಲ್ಲ
ಕನಸುಗಳ ರಿಂಗಣ
ಎದೆಯೊಳಗೆ ಬತ್ತಿಲ್ಲ
ಭರವಸೆಯ ಒರತೆ
ಹನಿಯುತ್ತಲೇ ಇದೆ
ಮತ್ತಷ್ಟೂ ಮೊಗೆದಷ್ಟು
ಮೊಗೆ ಮೊಗೆದು ಸುರಿವಷ್ಟು
- ಯು.ರಾಮು ಸಿರಿಗೆರೆ
24 Dec 2017, 06:59 pm
Download App from Playstore: