ತಿರುಗಿ ಬಂದುಬಿಡುವೆಯಾ ಮತ್ತೆ.....

ನೀರವ ಮೌನದ ಒಂಟಿ ಮನೆಯ ಮುಂದೆ
ಅಳುತ್ತಿದ್ದೇನೆ ಒಬ್ಬಂಟಿಯಾಗಿ...
ಮುಸುಕಿದೆ ಸುತ್ತಲೂ ಅಂಧಕಾರ,
ಸನಿಹ ಸೇರುತ್ತಿದ್ದಾರೆ ಒಬ್ಬೊಬ್ಬರಾಗಿ..
ಸೂತಕದ ಛಾಯೆ ಆವರಿಸಿದೆ ಸುತ್ತಲೂ,
ಕಾರಣವ ತಿಳಿಯದೆ ಮನುಜರು..
ಸಂತೈಸುತ್ತಿದ್ದಾರೆ ನೊಂದುಕೊಂಡು
ಯಾಕೀ ವೇದನೆ?
ಪ್ರಶ್ನೆಗಳು ಕಾತರದಿ ಕಾಯುತ್ತಿದೆ,
ಉತ್ತರ ಮಾತ್ರ ಯಾರಿಗೂ ತಿಳಿದಿಲ್ಲ
"ಕಣ್ಣೀರು ಇಳಿಯುತ್ತಿದ್ದ ಕನ್ಯೆಯ ಮೊಗ
ಬಾಡಿ ಹೋದ ಕುಸುಮದಂತಿದೆ"
ಯಾರೋ ಪಿಸುಗುಟ್ಟಿದ ಮಾತುಗಳು
ನನ್ನನು ತಲುಪಿ ಗಾಯವ ಮಾಡುತ್ತಿದೆ.
ಸಮಯ ಉರುಳುತ್ತಿದೆ,ಆತಂಕ ಹೆಚ್ಚುತ್ತಿದೆ
ಕರುಣೆಯು ಅಗಾದವಾಗಿದೆ.
ಮನಸು, ಹೃದಯದ ತುಂಬಾ ತುಂಬಿಕೊಂಡ
ನೋವಿನ ಯಾತನೆ ಸುಡುತ್ತಿದೆ
ಅಪರಾಧಿಯ ಹುಡುಕಲು ಹೃದಯ ಹಿಂಜರಿಯುತ್ತಿದೆ
ಮನಸ್ಸು ಕಲ್ಲಿನಂತೆ ಕುಳಿತಿದೆ...
ಎಷ್ಟೋ ವರುಷಗಳಿಂದ ನನ್ನ ಜೊತೆಗಿದ್ದ
ಮೊಗದಲ್ಲಿ ಸುಮದಂತೆ ಅರಳುತ್ತಿದ್ದ
"ನಗುವಿನ ಕೊಲೆಯಾಗಿದೆ"
ಕಣ್ಣುಗಳು ಅತ್ತು ಅತ್ತು ಸೋತುಹೋಗಿವೆ...
ಕಾರಣವ ತಿಳಿದ ಮನುಜರು
ಚಿತೆಯ ತಯಾರಿಯಲ್ಲಿದ್ದಾರೆ
ಇನ್ನೇನು ಚಿತೆಯಲ್ಲಿಡಲು
ಹೊತ್ತುಕೊಂಡು ಹೋಗುತ್ತಿದ್ದಾರೆ
ನನ್ನೊಂದಿಗೆ ಜೊತೆಯಾಗಿದ್ದ ನಿನ್ನನು
ಆಹುತಿ ಮಾಡಲು ನನಗಿಷ್ಟವಿಲ್ಲವೇ?
ನಾನೇನು ಮಾಡಲಿ
ಮರಳಿ ನೀನಾದರು ಬಂದು ನನ್ನಲಿ ಸೇರಿಕೋ,
ಕರೆದಾಗ ನೀನೆಲ್ಲಿ ಬರುವೆಯಾ ಇನ್ನು?
ವಿಧಿಯಾಟ ನೋಡು
ಕೊನೆಗೂ ನನ್ನ ಕೈಯಿಂದಲೇ ಕೊಳ್ಳಿ ಇಟ್ಟುಕೊಂಡೆಯಾ?
ಬದುಕ ತುಂಬಾ ಅಳುವನ್ನು ತಂದಿಟ್ಟೆಯಾ?
ನಾ ಏನು ಮಾಡಲಿ
ಅಗಲಿಕೆಯು ಅನಿವಾರ್ಯವಾಗಿದೆ!

- ಪ್ರಿಯಾಂಕ

26 Dec 2017, 07:53 pm
Download App from Playstore: