ಮೀನು

ಹೆಸರಿಲ್ಲದ ಮೀನು
ಉಂಡವರ
ಪಾಲಿಗದು ಜೇನು,
ಹುಟ್ಟಿದ್ದೆಲ್ಲೋ ಹಳ್ಳಿಗಾಡಿನ
ತೊರೆಯಲ್ಲಿ ತಾನು,
ಗೊತ್ತಿಲ್ಲ ಅದಕ್ಕೆ ಸಮುದ್ರದ
ಯಾವ ಕಾನೂನು.

ನದಿ ನೀರನ ಸಿಹಿಯ
ಕೇಳ್ಪಟ್ಟಿತು
ಈ ಬಣ್ಣ ಬಣ್ಣದ
ಪುಟ್ಟ ಮೀನು,
ಕೇಳಿದ್ದೆ ತಡ ಕಾಲ್ಕಿತ್ತು ಓಡಿತು
ತೊರೆಯಿಂದ ತಾನು.

ಕಂಗೊಳಿಸುವ ಚಿತ್ತಾರಗಳ
ಮದಿರೆ
ಸವಿದ ಮೀನು, ನೂತನ
ಸಂಗಡಿಗರೊಡನೆ ಆಡಿದ ಆಟವ
ಏನೆಂದು ಹೇಳಲಿ ನಾನು.

ನದಿಯದಡದಿ ಮರಡಿಯ ಜರಡಿ
ಹಿಡಿಯಲು ಬಂದ ಗರ್ಭಿಣಿಯ
ನೋಡುತ ನಿಂತ ಮೀನು,
ನೆನೆಯಿತು ತಾಯಿ
ಮಡಿಲ ಮಮತೆಯ ನೆಲವನು.

ನೀರ ರಭಸಕೆ ಕೊಚ್ಚಿ ಸಾಗಿತು
ಭವಭಯದಿ ಮನನೊಂದು ಮೀನು,
ನೂರು ನದಿಗಳ ಸಂಗಮ ನೋಡಿ ಅದರ ಕಂಗಳರಳಿದ ಬಗೆ ಅದೇನು.

ಕಡಲ ಭಾಷೆ ಅರಿಯದೆನೆ ಬೆಳೆದು
ನಿಂತಿತು ಮೀನು,
ಬಾಲ್ಯವ ನೆನೆದು ಚಿಮುಕಿಸಿತು ಕಣ್ಣೀರ ಹೊಳೆಯನು.

- ಚುಕ್ಕಿ

29 Dec 2017, 10:57 am
Download App from Playstore: