ಗುಲಾಬಿ ಮೊಗ್ಗಿನ ಹುಡುಗಿ

ಅಲೆದಾಡುತಲಿ ನಾನೊಮ್ಮೆ ಹೊಕ್ಕೆ
ಹೂವೊಂದೂ ಕಾಣದ ಹೂದೋಟಕ್ಕೆ.
ಎತ್ತ ಹುಡುಕಿದರೂ ಒಂದು ಹೂವಿಲ್ಲ
ಹತ್ತಿರ ಸೆಳೆವ ಒಂದು ನಗುವಿಲ್ಲ,
ಅತ್ತಿತ್ತ ತಿರುಗಿ, ನನ್ನಾಸೆ ಕರಗಿ
ನಿರಾಸೆಯನು ಕೊಂಡು
ಮನವು ಬೇಸರಗೊಂಡು
ಹೊರಡಲಾನುವಾದಾಗ
ತೋರಿದಳು ಮೊಗವ
ಆ ಮುಗ್ದ ಚೆಲುವೆ,
ಈಗಷ್ಟೇ ಅರಳಿರುವ
ಅರೆ ಮೊಗ್ಗಿನ ಹೂವೆ.

ಗುಲಾಬಿ ಬಣ್ಣದ ಹೂವಿನೆಸಳ
ಉಡುಗೆಯಲಿ ಈ ಚೆಂದುಳ್ಳಿ
ಹುಡುಗಿಯ ಚೆಲುವು ಬಹಳ
ನಡಿಗೆಯಲಿ ಒನಪು ವಯ್ಯಾರ
ನೋಟದಲ್ಲಿ ತುಂಬಿ ಕೊಂಚ ಶೃಂಗಾರ
ಸೆಳೆದಳೋ ಚೆಲುವಿ
ಪೌರ್ಣಮಿಯ ಬೆಳುದಿಂಗಳ
ಚೆಲ್ಲಿ ಹರಡಿದ ಕಂಗಳ
ಕಾಂತಿಯನು ಬೀಸಿ ಒಗೆದು
ಮನಸಿಗೆ ಉರುಳು ಹಾಕಿ ಹಿಡಿದು,
ಜೇನ್ದುಟಿಯ ಬಿರಿಯದೇನೆ
ಮೌನದಲೇ ನೂರು ಮಾತುಗಳ
ಮಾಣಿಕ್ಯವನು ಮಾಲೆ ಮಾಡಿ..
ಮಮತೆಯ ಮಡಿಲಲ್ಲಿ ಮಗುವಾಗೆಂದು
ಮೋಹದಲಿ ಮದನೆ
ಕೂಗಿ ಹೇಳಿದಳು..

ಸಂಪಿಗೆ ಎಸಳಿನ ನೀಳ
ಮೂಗಿನ ತುದಿಗೆ ಸಿಕ್ಕಿಕೊಂಡ
ಮೂಗುತಿಯ ಆಕರ್ಷಕ ಗಾಳ
ಹಾಕಿದಳು ಮನಸಿಗೆ
ತೀರಿಸಲಾರೆನು ಈ ಪ್ರೀತಿಯ ಸಾಲ
ಹುಟ್ಟಿ ಬಂದರೂನು
ಮತ್ತೆ ನೂರು ಕಾಲ!

- ಶ್ರೀಗೋ.

23 Jan 2018, 11:07 pm
Download App from Playstore: