ಏತಕೀ ಕೋಪ
ಏತಕೀ ಕೋಪ ರಾಧೆಯ ರಮಣ
ಪ್ರಯೋಗಿಸಬೇಡ ಇರಿವ ಮೌನ ಬಾಣ
ಕಾಣುವಾಸೆ ನಿನ್ನ ಸೂಜಿಗಲ್ಲ ಕಣ್ಣ
ತಿರುಗಿ ನೋಡೊಮ್ಮೆ ಸೋತ ಹೆಣ್ಣ
ಮುರಳಿ ನಾದದ ಪ್ರೇಮಸ್ವರ ಕೇಳದಿದ್ದರೆ
ಮನಕದ್ದವನ ತುಂಟ ನಗು ಕಾಣದಿದ್ದರೆ
ತಂಗಾಳಿಯಂತೆ ರಮಿಸುವ ಕೃಷ್ಣನೇ ಇರದಿದ್ದರೆ
ಈ ರಾಧೆಗೆಂದೂ ಜೊತೆಯು ಕಣ್ಣೀರೆ
ಮದನನೇ ನಿನ್ನ ಕಟು ಮುನಿಸು
ಕೊಲ್ಲುವ ಮುನ್ನ ನನ್ನ ಪ್ರೇಮಿಸು
ನೀನಿರದ ನಾನು ಬರಿಯ ಕನಸು
ಗೋಪಾಲನೆ ಈ ಗೋಪಿಯ ಉಳಿಸು
ಮುರಳೀದರ ಒಲುಮೆಯಲೇಕೆ ಈ ಅಪಸ್ವರ
ಪೂಜಿಸುವ ರಮಣಿಯ ಮಾಡುವೆಯ ದೂರ
ಪ್ರೀತಿಸಿಗದ ಮನಸೆಂದು ಭೂಮಿಗಿಂತ ಭಾರ
ಹಿಡಿದ ಕೈಯ ಬಿಡಿಸಿ ಹೋಗದಿರೊ ಅಭ್ಯಂಕರ
- ಶ್ರೀಕಾವ್ಯ
25 Jan 2018, 12:45 am
Download App from Playstore: