ನೀ ಬರಬೇಕಿದೆ
ಹಣೆಗಿಟ್ಟ ಬೊಟ್ಟೂ ಕೂಡ
ಅಣಕಿಸುತಿದೆ ಕಂಡಾಗಲೆಲ್ಲ ನನ್ನ
ಬೇಡವೆಂದರು ನೆನೆದು ನಿನ್ನ
ಕಿವಿ ತುದಿಯಲಿ ಸದಾ ಹರ್ಷದಲಿ
ಕುಣಿದಾಡುತ್ತಿದ್ದ ಓಲೆಯೂ ಮೂಕವಾಗಿದೆ
ನಿನ್ನ ಪಿಸು ನುಡಿಯ ಮಾತು ಕೇಳದೆ
ನಿಶ್ಯಬ್ಧ ಆವರಿಸಿದೆ ಮುಂಗುರುಳಿಗೆ
ಕುಳಿತು ಜೀಕುವ ಕೈ ಬೆರಳಿಲ್ಲದೆ
ಕಿವಿಯ ಹಿಂದೆ ಸರಿದು ಕಾಣದಾಗುತಿದೆ
ತುಟಿಗಳು ಬಂಧಿಯಾಗಿಬಿಟ್ಟಿವೆ
ತೆರೆವ ಕೀಲಿ ಎಲ್ಲಿಯೂ ಕಾಣದಾಗಿದೆ
ಜೋಪಾನವಾಗಿ ಕೀಲಿ ಎತ್ತಿಟ್ಟವನೇ ತೆರೆಯಬೇಕಿದೆ
ಕಂಬನಿ ಪ್ರವಾಹದಲಿ ಸಿಲುಕಿ
ಕಣ್ಣಾಲಿಯಲಿ ಕಾಡಿಗೆ ನಲುಗುತಿದೆ
ಅಕಾಲಿಕ ಮೃತ್ಯುವ ನೆನೆದು ಅಳುತಿದೆ
ಕಣ್ಣೀರ ಸಾಗರಕೇಕೊ ತೀರದ ಮೇಲೆ
ಎಂದೂ ತೀರದ ಪ್ರೀತಿ ಬಂದಂತಿದೆ
ಎಲ್ಲೆ ಮೀರಿ ಗಲ್ಲ ಸವರಿ ರಮಿಸುತಿದೆ
ಅಧರದ ಅಂಚಿನ ಜೇನ ಸವಿದು
ಕಣ್ಣನಿಯು ನಾನೇ ನಿನಗೆ ನಲ್ಲನೆನುತಿದೆ
ಅವನ ಮಾತ ಸುಳ್ಳಾಗಿಸಲಾದರು ನೀ ಬರಬೇಕಿದೆ
- ಶ್ರೀಕಾವ್ಯ
04 Feb 2018, 04:01 pm
Download App from Playstore: