ಬಿಗುವಾಯ್ತು ಉಡುಗೆ !
ಬಿಗುವಾಗಿದೆ ನನ್ನ ಚೆಲುವೆ ತೊಡುವ ಉಡುಗೆ
ಸೊಗಸಾಗಿದೆ ನಗು ಚೆಲ್ಲಿ ನಡೆವ ಅವಳ ನಡಿಗೆ
ಹೆಣ್ತನದ ಊರಲ್ಲಿ ಹರೆಯದ ನೆಂಟರ ಸಂಚಾರ
ಕಣ್ತುಂಬುವ ನಾರಿಗೆ ಯೌವ್ವನದ ಬಂಟರ ಉಪಚಾರ.
ತುಂಬಿಕೊಂಡ ನಯ ನುಣುಪಿನ ಗುಳಿ ಕೆನ್ನೆ
ಕಲಿತಿರುವಳು ಈಗಷ್ಟೇ ಮಿಟುಕಿಸಿ ಸೆಳೆವ ಕಣ್ಸನ್ನೆ
ಕೆಂದುಟಿಗಳಲಿ ಪ್ರೇಮಾಮೃತದ ಮೃದು ಬೆಣ್ಣೆ
ಅಂಗಗಳು ಅರಳಿ ತುಂಬಿಕೊಂಡವೋ ಮಧುರ ಕನಸನ್ನೇ!
ಕೌಮಾರ್ಯ ಕಳೆದು, ಹೆಣ್ತನವು ಸುಳಿದು
ಮಧುರ ಮನದ ಎದೆಯಂಗಳದಲ್ಲಿ
ಸುಂದರ ಸುಕೋಮಲ ಕುಂಭಗಳನ್ನಿಟ್ಟು
ಕಾಮನೆಯ ಅಮೃತವನು ತುಂಬಿದವರಾರೆ?
ಬಾಲ್ಯವನು ತೊಳೆದು, ಹೊಂಗನಸು ಬೆಳೆದು
ಕಂಗಳಲ್ಲಿ ಕಾಮನ ಬಿಲ್ಲನು ಮೂಡಿಸಿ,
ಎಳೆಯ ಇಳೆಯ ಮೇಲೆ ಆಸೆಯ ಹೊಳೆಯ
ಹರಿಸಿದವರಾರೆ?
ಹೇಳೇ ಚೆಲುವಿ ಬಿಗುವಾಯ್ತೆಕೆ ನಿನ್ನುಡುಗೆ?
ಬಡವಾಗಿದ್ದ ಮನಸಲ್ಲಿ ತುಂಬಿಕೊಂಡವೆ
ಎಣಿಸಲಾಗದ ಸುಂದರ ಕನಸುಗಳ ಕೊಡುಗೆ.
- ಶ್ರೀಗೋ.
20 Feb 2018, 04:18 pm
Download App from Playstore: