ಮುಂಗಾರು

ಸೂರ್ಯ ಚಂದ್ರಮರು ಆಟವಾಡಿಹರು
ಮೋಡದಾ ಸೆರಗಿನ ಮರೆಯಲ್ಲಿ,
ಇಳೆಗೆ ಅವರೇ ಸೊಗಸು
ಹರೆಯದ ಇಳೆಯ ಕನಸು.
ಆಗೀಗ ಕೊಂಚ ಗಾಳಿಯದು ಬೀಸಿ
ಮೋಡವನು ಆಚೀಚೆ ಒಂಚೂರು ಸರಿಸಿ
ಇಣುಕಿ ಬಿಡುವರು ಅವರು ಸೌಂದರ್ಯ ಸ್ಪುರಿಸಿ.

ಮೋಡ ಸರಿದರೆ ದೂರ
ಕಣ್ಣು ಕುಕ್ಕುವನು ಸೂರ್ಯ
ಬೆಳುದಿಂಗಳು ಚೆಲ್ಲುವನು ಚಂದ್ರ
ಅರೆ ಕ್ಷಣದಿ ಸೆಳೆದು ಬಿಡುವರು
ಎಲ್ಲಾರ ಕಣ್ ನೋಟ ಹಿಡಿದಿಟ್ಟು ತಮ್ಮೆಡೆಗೆ..
ಇಳೆಯೋ ಹರೆಯದ ಪೋರಿ
ನಾಚಿಕೆ ಅಡರಿರುವ ಸುಂದರ ನಾರಿ..
ತೋರಲಾರಳು ತನ್ನ ಸೌಂದರ್ಯ ಖನಿಯ
ಹಾಗೆಲ್ಲ ಮೈ ಮರೆತು ಅಲ್ಲದಿರೆ ಇನಿಯ!

ಮುಂಗಾರು ಎಂದರದು ಇಳೆಗೆ ಯೌವ್ವನವು
ಮೋಡ ಮುಸುಕಿದರೆ ಸೆರಗ ಸೌಂದರ್ಯವು
ಸೂರ್ಯ ಚಂದ್ರರ ಕಣ್ಣಾ ಮುಚ್ಚಾಲೆ ಆಟ
ಮನಸಿಗೆ ನೀಡುವುದು ಅಂದದ ರಸದೂಟ!

- ಶ್ರೀಗೋ.

10 Mar 2018, 08:16 am
Download App from Playstore: