ಖಾಲಿ ಜೋಳಿಗೆ
ಬರೆದು ಸವೆದ ಲೇಖನಿಯಲ್ಲಿ
ಪದಗಳೇ ಹುಟ್ಟುತ್ತಿಲ್ಲ ಯಾಕೋ
ಕರಗಿ ಹೋಗಿವೆ ಕತ್ತಲ ಬದುಕಿನೊಳಗೆ
ಕೊರಗಿ ಸೊರಗಿವೆ ಕೃಶ ದೇಹದೊಳಗೆ.
ನಿನ್ನ ಇಂಚಿಂಚು ದೇಹವನು
ಜಾಲಾಡಿ ಹುಡುಕಿ ಹೊಸ ಪದಗಳ
ಬಸಿದು ಬರೆದೆನಂದು ನೂರಾರು
ಪ್ರಣಯ ಪ್ರೇಮ ಕವಿತೆ.
ನನ್ನ ಮನದಾಸೆ ದಾಹವನು
ತಾಳಲಾರದೆ ಕುಗ್ಗಿ ಕುಸಿದೆನು ಇಂದು
ಬರೆಯಲಾರದೆ ಕಿರು ಸಾಲೊಂದರಲ್ಲೇ ನಾ ಸೋತೆ.
ಹಳಸಲು ಪದಗಳಷ್ಟೇ ಉಳಿದಿವೆ
ಈ ಬಡ ಕವಿಯ ಹರಕು ಜೋಳಿಗೆಯಲ್ಲಿ,
ಹೊಸ ಪದಗಳ ಕಾಮನಬಿಲ್ಲು ಕರಗಿದೆ
ಸುಂದರಿಯ ಅನುಪಸ್ಥಿತಿಯಲ್ಲಿ.
ಗಂಟಲು ಕಟ್ಟಿದೆ ವಸಂತದಲ್ಲೂ ಕೋಗಿಲೆಗೆ,
ಗರಿ ಸುಟ್ಟಿದೆ ಆಡುತ್ತಿದ್ದ ಗಂಡು ನವಿಲಿಗೆ!
- ಶ್ರೀಗೋ.
17 Mar 2018, 03:37 pm
Download App from Playstore: