ಶಿಲೆಗೆ ಸೋತ ಸುಶೀಲೆ
ಬೇಲೂರ ಶಿಲೆಯ ರಸ ಕಲೆಯ ಮುಂದೆ
ನವಿಲೂರ ನೈದಿಲೆ ಹಸನಾಗಿ ನಿಂತಿಹಳು
ಕನಕಾಂಬರ ಹೂವಿನ ಮಾಲೆಯನು ಮುಡಿದು
ಕಿವಿಯೋಲೆ ಆಭರಣ ಅಂದವಾಗಿ ಧರಿಸಿ.
ಕೆಂದುಟಿಯಲಿ ಇಣುಕಿಹುದು ಕಿರು ಮಿಂಚಿನ ನಗುವು
ಶೀಲಾ ಬಾಲಕಿಯ ಕಂಡು ಹೊಮ್ಮಿರುವುದೇನೋ,
ಶಿಲ್ಪಿಯ ಕಲೆಯ ಸೊಬಗು
ಈ ಚೆಲುವಿಯ ನಲ್ಮೆಯ ನಗುವು.
ತಾನೇ ಯಾರೋ ಕಡಿದ ಶಿಲ್ಪವೆಂದರಿಯದೆಲೆ
ಮಾರು ಹೋಗಿಹಳು ಮತ್ತೊಂದು ಶಿಲ್ಪಕ್ಕೆ ತರಳೆ.
ಕೆನ್ನೆ ತುಸು ಕೆಂಪಾಗಿಹುದು
ಸೂರ್ಯನ ಬಿಸಿಲ ಹೊಡೆತಕ್ಕೊ
ಮನದ ಇನಿಯನ ಮಧುರ ಸೆಳೆತಕ್ಕೊ..
ತೂಗಿ ತೊನೆಯುತ್ತಿದೆ ತರುಣಿಯ ಲೋಲಾಕು
ಕಡುಗಣ್ಣ ಸೆಳೆದು ಬೀಗುತ್ತಿದೆ ಲಲನೆಯ ಪೋಷಾಕು.
ಬಂಗಾರ ಬಣ್ಣದ ಅಂಚಿನ ಸೀರೆ
ಒಪ್ಪವಾಗಿ ಉಟ್ಟು ಹೊದ್ದ ಸುಂದರ ನೆರಿಗೆ
ತುಸುವೇ ಕದ್ದು ಇಣುಕಿದ ಎದೆಯ ಚಂದ್ರಮ
ಮರೆತಳೇನೋ ಮುಚ್ಚಿಟ್ಟುಕೊಳ್ಳಲು ಅವನ.
ಕಿರು ಬಾಳೆ ದಿಂಡಿನಂತೆ ನುಣುಪು ಕೈಗಳು
ತರು ಲತೆಗಳಂತೆ ಹೊಸೆದ ಬೆರಳು
ಬಳುಕು ನಡೆಗೆ ಉಳುಕುವುದೇನೋ ಸಿಂಹ ಕಟಿ,
ಒಮ್ಮೆ ತಿರುಗಿ ನನ್ನತ್ತ ನೋಡಬಾರದೆ
ಬೀಸಿ ನೋಟದ ಈಟಿ!
- ಶ್ರೀಗೋ.
28 Mar 2018, 10:11 pm
Download App from Playstore: