ಗಜಲ್

ಹೇಳಲಾಗದೆ ಉಳಿದ ಮಾತು ಮೌನದ ಅರಮನೆಯೊಳಗೆ ಬಂದಿಯಾಗಿದೆ ಚಂದಿರ
ಮಾತಾಗದ ಮೌನ‌ ಕೊರಳೊಳಗಿನ ಉಸಿರ ಕದಿಯುತಿದೆ ಚಂದಿರ

ಹಸಿ ಕನಸು ಹುಸಿ ನನಸಿನಾಟಕೆ ಮರುಳಾಗಿ ರೆಕ್ಕೆ ಬಿಚ್ಚಿ ಮೇಲೆ ಹಾರಿ ಹಾರಿ ಸೋತು ಕೆಳಗೆ ಬೀಳುತಿದೆ ಚಂದಿರ

ಜಗದ ಬೆಳಗೊಳಗೂ ಮನದೊಳಗೆ ಮಬ್ಬುಗತ್ತಲು
ಎದೆಗಣ್ಣಿಗೆ ಕತ್ತಲಾವರಿಸಿ ದಾರಿ ತೋರಿಸಿರೆಂದು ಕೇಳಲಾಗದೆ ಹೆಜ್ಜೆ ತಪ್ಪಿದೆ ಚಂದಿರ

ಸೆರೆ ಸಿಕ್ಕ ಮಾತು ಬಿಡುಗಡೆಯ ಬಯಸಿ ಸೆರೆಮನೆಯ
ಆಚೆಯ ಬೆಳಕ ಕಣ್ತುಂಬಿ ಹಗುರಾಗಿ‌ ಹಾರಲು ಹವಣಿಸುತಿದೆ ಚಂದಿರ

ಮಾತು ಗಲ್ಲಿಗೇರಿ ನೇಣಿನ‌ ಕುಣಿಕೆಯೊಳಗೆ ವಿಲವಿಲನೆ ಒದ್ದಾಡಿ
ಶ್ರೀಕಾವ್ಯಳ ಜೀವವನೆ ಹೊತ್ತೊಯ್ಯುವ ಮುನ್ನ ನೀನಾದರು ಮಾತಿಗೆ ಧ್ವನಿಯಾಗಬೇಕಿದೆ ಚಂದಿರ

- ಶ್ರೀಕಾವ್ಯ

18 May 2018, 06:13 pm
Download App from Playstore: