ಮಳೆಗಾಲ
ಅಂಬರದ ತುಂಬೆಲ್ಲ ನೆರೆದಾವು ಕರಿ ಮೋಡ
ದಿಗಂಬರದ ಭುವಿ ಮೇಲ ಸುರಿದಾವು ಮಳೆ ನೋಡ
ಪಳ್ಳನೆ ಹೊಳೆದ ಮಿಂಚು ಸುಳಿಯ ಕಳ್ಳಾಟ
ಜಳ್ಳನೆ ನೊರೆಯುಕ್ಕಿ ಹರಿದ ಹಳ್ಳದ ಹಸಿ ನೋಟ..
ಕಲ್ಲಡಿಗೆ ಮಲಗಿದ್ದ ಕಪ್ಪೆಗಳು ಕುಮುಟಿ ಎದ್ದು
ಗಂಟಲ ಒರಟು ಗಾಯನದ ಕಿವಿಗವಡುಚ್ಚಿದ ಸದ್ದು
ಕುಮುಸಲು ಮಟ್ಟಿಯ ಪೊದೆಯ ಒಳಗೆ
ಹುದುಗಿದ್ದ ವರಲೆಯ ಹುತ್ತದಿಂದೆದ್ದ
ಹೆಗ್ಗಾಲಣಬೆಯ ಬಿಳಿ ಮೊಟ್ಟೆ ಮೊಗ್ಗು.
ಗಂಡು ಹೆಣ್ಣು ಮೀನು ಕೂಡಿ
ಮಳೆಯ ಹೊಳೆಗೆ ನಲಿದು ಆಡಿ
ಮೊಟ್ಟೆಯಿಟ್ಟು ಮರಿಯ ಮಾಡಿ
ಬಿಡಲು ಗುಂಪುಗೂಡಿ ಹೊರಟ ಮೋಡಿ.
ಕಂಬಳಿ ಕೊಪ್ಪೆ ಹಾಕಿಕೊಂಡು,
ಕೈಲಿ ಹುಲ್ಲುಗತ್ತಿ ಹಿಡಿದುಕೊಂಡು
ಸೊಪ್ಪು ಸದೆಯ ತರುವೆನೆಂದು
ಹೊರಟಿರುವ ಹಳ್ಳಿ ಹೈದ.
ನೆಲವ ನೆನೆಸಿ, ಹೊಲವ ತೋಯಿಸಿ
ಉತ್ತು ಬಿತ್ತು ಬೆಳೆವ ರೈತನೊಲವ ಗಳಿಸಿ
ಸುರಿವ ಮಳೆಯೇ, ಸಲಿಲ ಸಿರಿಯೇ
ಸುರಿಯೆ ಹರಿಯೆ ಇಳೆಯ ಪೊರೆಯೆ !
- ಶ್ರೀಗೋ.
20 May 2018, 06:28 am
Download App from Playstore: