ಜಾತ್ರೆ ಸಾಗಿದೆ..

ಕಿವಿಗವಡುಚಿಕ್ಕುವ ಜೋರು ಸದ್ದನು ಕೇಳಿ
ಬೆಚ್ಚಿ ಬಿದ್ದು ಎದ್ದು ಕುಳಿತೆ ಈ ನಡು ರಾತ್ರಿಯಲಿ.
ಊರ ಹೊರಗಿನ ನನ್ನ ಒಂಟಿ ಮನೆ ನಡುಗುತ್ತಿದೆ
ತಮಟೆ ಡೋಲು ವಾದ್ಯಗಳ ಸದ್ದು ಗದ್ದಲಕೆ,

ಎದ್ದು ನೋಡಿದರೆ ಸಾಗುತ್ತಿದೆ ದೊಡ್ಡಮ್ಮನ ಜಾತ್ರೆ
ಊರಿಗೆಲ್ಲ ದೊಡ್ಡ ಹಬ್ಬ, ಬೀದಿಯೆಲ್ಲ ಜನ ಜಂಗುಳಿ,
ಮನೆ ಮನೆಗೂ ಮರಿ ಹೊಡೆದು ತಿಂದುಂಡ ಜನರು
ಈ ರಾತ್ರಿಯಿಡೀ ಊರೆಲ್ಲಾ ತಿರುಗಾಡುತ್ತ ಜೀರ್ಣಿಸಿಕೊಳ್ಳುತಿಹರು.

ಹಾರುತ್ತಿವೆ ಬಣ್ಣ ಬಣ್ಣದ ಪಟಾಕಿ
ಅಂಬರಕ್ಕೆ ಮುತ್ತಿಕ್ಕಿ ಸಿಡಿಯುತ್ತಿವೆ ಬಣ್ಣದೋಕುಳಿ ಚೆಲ್ಲಿ,
ಕಿವಿ ತಮಟೆಯನು ಸೀಳಿ ಬೋರ್ಗರೆವ ಸದ್ದು
ಗಾಳಿಯೊಂದಿಗೆ ಬೆರೆಯುತಿರುವ ಗಂದಕ.

ಬೇರೆ ಬೇರೆ ತಂಡಗಳ ವಾದ್ಯ ಗುಂಪು
ಜಾನಪದ, ಆಧುನಿಕ, ಸಿನೆಮಾ ಸಂಗೀತ
ಡಿಸ್ಕೊ ಡ್ಯಾನ್ಸು, ಕರಡಿ ಹುಲಿ ಕುಣಿತ
ಜೊತೆಗೆ ನಡು ನಡುವೆ ಕುಡುಕರ ತಕದಿಮಿತ.

ಲಲನಾಮಣಿಯರೂ ಹೊರಟಿರುವರು ನಿದ್ದೆ ಬಿಟ್ಟು
ವೈಯ್ಯಾರದಿ ಹೊಸ ಜರತಾರಿ ಸೀರೆಗಳನು ಉಟ್ಟು
ಅಂದು ನನ್ನ ನಿದ್ದೆ ಕದ್ದವರೆಷ್ಟೋ,
ಪ್ರೀತಿಗಾಗಿ ಹಂಬಲಿಸಿ ಹೋದಾಗ ತಿರಸ್ಕರಿಸಿ ಮುನ್ನಡೆದವರೆಷ್ಟೋ..

ಎಲ್ಲರಿಗೂ ಅವರವೇ ನೂರಾರು ಕಾರಣಗಳು..
ಎಲ್ಲವನೂ ಮರೆತು ಸಾಗಿದೆ ಜಾತ್ರೆ
ನಡೆಯುತ್ತ ಇರುವ ವರೆಗೂ ಬಣ್ಣಗಳ ನೋಡುತ್ತ
ಅಂದಂದಿನ ಸುಖ ದುಃಖವ ಅಂದಂದೇ ಉಣ್ಣುತ್ತಾ..

ಕೊನೆಗೂ ಜಾತ್ರೆಯ ಜಂಗುಳಿ ದೂರಾಗುತ್ತಿದೆ
ಒಂಟಿ ಮನೆಯ ಬಾಗಿಲಿಗೆ ಮಿಡವೇ ಇಲ್ಲ,
ಜಗದ ಜಂಜಡವಿಲ್ಲದ ಮನೆಗೆ
ಬಾಗಿಲ ಗೊಡವೆಯು ಬೇಕಿಲ್ಲ.

- ಶ್ರೀಗೋ.

24 May 2018, 03:20 am
Download App from Playstore: