ತುಸು ಕಾಡೊ ಗೆಳತಿ ನಾನು....

ಭುವಿಗೆ ಸುರಿವ ಚೆಲುವ ಮಳೆಯು
ನೀನು ತರುವ ಮಾತಿನ ಸವಿಯು
ಸಾಕೆನಿಸಿದರು ಒಮ್ಮೊಮ್ಮೆ ನಿಲ್ಲದ ಅತಿವೃಷ್ಟಿ
ಮಗದೊಮ್ಮೆ ಕಾಣದೆ ಬರಡಾಗಿಸೊ ಅನಾವೃಷ್ಟಿ

ಮಳೆಯೊಳಗೆ ತನುವು ನಲಿದ ಮೇಲೂ
ಬೇಕೆನಿಸದಿರುವುದೆ ಮತ್ತೆ ಹನಿಗಳ‌ ಸಾಲು
ತುಸು ಹೆಚ್ಚೇ ಕಾಡೋ ಗೆಳತಿ ನಾನು
ಮುನಿಸು ಸಹಿಸಿ ಮುದ್ದಿಸು ನನ್ನನು

ಕಣ್ಣ ಅಂಚಲಿ ಕೇಳದೆ ಕಂಬನಿ ಜಾರುವಾಗ
ತಂದುಕೊಡು ಕಣ್ಣೀರು ಮರೆಸೊ ಮಾತು ಬೇಗ
ಅನುಬಂಧದ ಭಾವಕೆ‌ ಮಿತಿ ಹಾಕಲಾಗದವಳು ನಾನು
ಅತಿಯಾದರೆ ಒಮ್ಮೆ ಅಪ್ಪಿ ಮನ್ನಿಸು ನನ್ನನು

ಬಾಡುತಿದೆ ಮಳೆಗೆ ಕಾದು ಕುಳಿತ ಹೂವು
ಹನಿಯಾದರು ಚೆಲ್ಲು ಮಾತಿನಮಳೆಗೆ ತರದೆ ಸಾವು
ಒಲವ ನವಿರು ಮಾತಿಗೆ ಕಾದು ಕುಳಿತಿರುವೆ ನಾನು
ಒಮ್ಮೆ ನೆನೆದು ಬಂದು ಮಾತ ಸುರಿಸಿ ಅರಳಿಸು ನನ್ನನು

- ಶ್ರೀಕಾವ್ಯ

14 Jun 2018, 06:35 pm
Download App from Playstore: