ಪ್ರೀತಿಯೇ ಪ್ರಶ್ನೆಯಾದರೆ....

ನನ್ನ ಕಣ್ಣ ವರ್ಷವೆಲ್ಲ
ನಿನ್ನೆದೆಯ ನೆಲದಲ್ಲಿ
ಹಿಂಗಿದ ಮೇಲೂ
ಏತಕೆ ನಾನು ನೀನು
ಬೇರೆನ್ನುವ ಭಾವ

ನನ್ನೆಲ್ಲ ನೋವುಗಳೆಲ್ಲ
ನಿನ್ನ ತೋಳ ತೆಕ್ಕೆಯೊಳಗೆ
ಬಂಧಿಯಾದ ಮೇಲೂ
ನೀ ದೂರ ನಿಂತರೆ
ಸಹಿಸುವುದೇನು ಈ ಜೀವ

ಕತ್ತಲನೆ ಅಪ್ಪಿ ಸುಖಿಸಿದ ಕಣ್ಣಿಗೆ
ಕಾಮನಬಿಲ್ಲ ತೋರಿಸಿ
ರಂಗಿನ ಕನಸ ಬಿತ್ತಿದ ಮೇಲೂ
ನೀನೊಂದು ಕನಸೆಂದರೆ
ಸೇರದೆ ಇರುವೆನೆ ಸಾವ

ಕಂಬನಿಯ ಚುಂಬನದಲೆ
ಕಾಲ ಕಳೆದ ಅಧರಗಳಿಗೆ
ಸಿಹಿಜೇನ ಜೌತಣವಿತ್ತೂ
ಮಾತಿರದ ಬರಿಯ ಮೌನವೆಂದರೆ
ತಾಳಿ ಉಳಿಯಲಾಗುವುದೆ ಆ ನೋವ

ಮೂಲೆ ಸೇರಿ ಅವಿತು ಕುಳಿತ
ಮುಂಗುರುಳ ಬೆರಳಲೆ ರಮಿಸಿ
ಕಿಡಿಗೇಡಿತನದ ಕಿಡಿಯ ಸೋಕಿಸಿ
ಒಂಟಿ ನೀನು ಇನ್ನೆಂದೂ ಎಂದರೆ
ಕಾಡದಿರುವುದೆ ಮನವ

ಹೃದಯದೂರ ಡಾಂಬರು ಕಾಣದ
ಬೀದಿಗಳ ಒಪ್ಪ ಮಾಡಿ ಸಿಂಗರಿಸಿ
ನಿನ್ನೊಲವ ತೇರ ಎಳೆದ ಮೇಲೂ
ಪ್ರೀತಿ ಉತ್ತರವಿರದ ಪ್ರಶ್ನೆಯಾದರೆ
ಮತ್ತೆ ಮನವು ತೆರೆವುದೆ ಪ್ರೀತಿಗೆ ಕದವ

- ಶ್ರೀಕಾವ್ಯ

07 Jul 2018, 04:18 pm
Download App from Playstore: