ಬದಲಾವಣೆ

ಕಿಶೋರನಾಗಿದ್ದಾಗ
ಜಗದ ಜನರ ಮನಸ್ಸನ್ನು ಬದಲಾಯಿಸುವ ಕನಸಕಂಡೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ವಿದ್ಯಾರ್ಥಿಯಾಗಿದ್ದಾಗ
ಛಾತ್ರ ಸಂಘಟನೆಯ ಮೂಲಕ ಅವರ ಮನಃ ಪರಿವರ್ತನೆಯ ಕನಸ ಕಂಡೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಯುವಕನಾಗಿದ್ದಾಗ
ಯುವ ಶಕ್ತಿಯ ಸಂಘಟನೆಯ ಮೂಲಕ ಅವರಲ್ಲಿ ಬದಲಾವಣೆಯ ಆಶೆ ಪಟ್ಟೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಗೃಹಸ್ಥಾಶ್ರಮದಲಿ
ಅರ್ಧಾಂಗಿಯಲ್ಲಾದರೂ ಬದಲಾವಣೆ ತರಲು
ಶತ ಪ್ರಯತ್ನವ ಪಟ್ಟೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಮಕ್ಕಳಾದ ಮೇಲೂ
ಛಲ ಬಿಡದೆ ಅವರಲ್ಲಾದರೂ ಬದಲಾವಣೆಯ ಪರ್ವ ಬಯಸಿದೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಮರಣ ಶಯ್ಯೆಯಲಿರುವಾಗಲನಿಸಿತ್ತು
ಇಷ್ಟೆಲ್ಲಾ ಸೋಲುಗಳ ಬದಲು ನನ್ನಲ್ಲೇ ಬದಲಾವಣೆ ತಂದುಕೊಳ್ಳಬೇಕಿತ್ತೆಂದು,
ಸಮಯ ಸರಿದು ಹೋಗಿತ್ತು ಸಾದಿಸಲದನು.
*ಗುರುಪೂರ್ಣಿಮ, ಜುಲೈ, 2018
ಡಾ!ಸಿ.ಮುರಳೀಧರ

- ಡಾ!ಸಿ.ಮುರಳೀಧರ

27 Jul 2018, 04:30 pm
Download App from Playstore: