ಚೆಲ್ಲಿಬಿಡಿ ಹೊರಗೆ
ಚೆಲ್ಲಿ ಬಿಡಿ ಅಳಿದುಳಿದ್ದದ್ದನ್ನೆಲ್ಲ
ಮನೆಯಲಿ ತಿನ್ನದೆ ಕೊಳೆತದ್ದು
ಹೆಚ್ಚಾಗಿ ಬೇಯಿಸಿ ಉಳಿದದ್ದು
ಚೆಂದವಿಲ್ಲವೆಂದು ಮೂಲೆಯಲಿ ಬಿದ್ದದ್ದು
ಎಲ್ಲವನ್ನು ಚೆಲ್ಲಿಬಿಡಿ ಹೊರಗೆ
ಹೇಳಿ ತೀರಲಾಗದಂತ ಹಸಿವು
ಪುಟ್ಟ ಹೊಟ್ಟೆ ಬೆನ್ನಿಗಂಟಿದೆ
ಹಿಡಿ ಮಾಂಸವೂ ಇರದೆ ಹೊರಬಂದ
ಎದೆಯೆಲುಬು ಹಾಳು ಜಗವ ನೋಡಿ ನಗುತಿದೆ
ತಾಳಲಾರೆನಿನ್ನು ಚೆಲ್ಲಿಬಿಡಿ ಹಳಸಿದ್ದಿದ್ದರು ಹೊರಗೆ
ಚೆಲ್ಲುವುದ ನಿಲ್ಲಿಸಿ ಬಿಟ್ಟೀರಿ ಕಸದತೊಟ್ಟಿಗೆ
ಈ ಪಾಪಿ ಜನರು ತಿಂದು ಬದುಕಿಬಿಟ್ಟಾರೆಂದು
ತಿರುಗಿ ಮನೆ ಮನೆ ಬೇಡಿ ಬಂದರೂ
ಮುಷ್ಟಿಯಷ್ಟು ತಿನ್ನಲು ಏನು ನೀಡಲಾಗದವರು ನೀವು
ಎಂಜಲು ಹಳಸಿ ಅಳಿದುಳಿದ್ದದ್ದು ಎಲ್ಲವ ಚೆಲ್ಲಿಬಿಡಿ ಹೊರಗೆ
ಸಿಕ್ಕಿದ್ದನ್ನ ಬಾಚಿ ಹಂಚಿ ತಿಂದು ಬದುಕಿ ಬಿಡುತ್ತೇವೆ
ಪಾಪಿ ಹಸಿವು ಬೇಡವೆಂದರು ಬಿಡದು
ಕಸದೊಳಗೆ ಬಿದ್ದ ನಾಯಿ ಹಂದಿ ತಿಂದು ತೇಗಿ
ಬಿಟ್ಟುಹೋದ ಹಿಡಿ ಅನ್ನವನ್ನಾದರು ತಿನ್ನುತ್ತೇವೆ
ಹಾಳು ಜೀವವ ಉಳಿಸಲಾದರು ಚೆಲ್ಲಿಬಿಡಿ ಹೊರಗೆ
- ಶ್ರೀಕಾವ್ಯ
28 Aug 2018, 06:01 pm
Download App from Playstore: