ಬಳಗ ಹೊಗೆಯದ ಎತ್ತು ಬೇಕು..

ಎತ್ತುಗಳು ಬೇಕು ಊರಿನ ಹೊಲ ಹೂಡಲು...
ಸ್ವಚ್ಛ ಮನಸ್ಸು -ನಿಸ್ವಾರ್ಥ ಸೇವೆಯ ಹಾಡು ಹಾಡಲು..

ನಕರಾತ್ಮಕ ಚಿಂತನೆಯ 'ಸುಳಿ'ಯಿರದ..
ತುಂಬಿದೋಲಕೆ ಬಿಟ್ಟರೂ 'ಬದು'ವನ್ನಷ್ಟೇ ಮೆಯುವ..
ಮುಟ್ಟಿದರೆ ಬೆದರದ, ತಟ್ಟಿದರೆ ಅದರದ...
ಮನೆಯಷ್ಟು ಮಂದಿ ಹಿಡಿದರು ಹಿರಿಯದ... !

'ಬಂಡಿ'ಗೂ - 'ನೊಗ'ಕ್ಕೂ ಸೈ ಎನ್ನುವ...
ಸೇವೆಯಂಬ 'ಮೇವ'ನಷ್ಟೇ ಹೊಟ್ಟೆತುಂಬ ಮೆಯುವ..
ನಿಂದೆ ಅಪವಾದದ 'ಮುಸುರಿ' ನೀರು ಕುಡಿಯುವ..
ಮೆರವಣಿಗೆಯಲ್ಲೂ ನೆತ್ತಿಮೇಲಿನ 'ಕೊಂಬ'ನು ಬಗ್ಗಿಸುವ...!!

'ಕೂರಿಗೆ '- 'ಕುಂಟೆ'ಗೂ ತಂಟೆ ತಗೆಯದ...
'ಗಳೆವ' ಹೂಡಿದಾಗ ದುಬ್ಬ ಮುಟ್ಟಿಸಿಕೊಳ್ಳದ..
ತುಂಬಿದ ಬಂಡಿಯಲಿ ,ಹ್ಯಾಸಿ,ಎಳೆಯದ..
ಏನೂ ಇಲ್ಲದಿದ್ದರೂ ಅರ್ಧಕ್ಕೆ "ಬಳಗ" ಹೊಗೆಯದ..!!!

ಎತ್ತುಗಳು ಬೇಕು ಊರಿನ ಹೊಲ ಹೂಡಲು...
ಸ್ವಚ್ಛ ಮನಸ್ಸು -ನಿಸ್ವಾರ್ಥ ಸೇವೆಯ ಹಾಡು ಹಾಡಲು..

ಸುಗ್ಗಿ..

- ಆರ್ ಎಸ್ ಸುಗ್ಗಿ.

02 Sep 2018, 02:24 pm
Download App from Playstore: