ಜೇಡರ ಬಲೆ
ಜೇಡರ ಬಲೆಯೋಂದು
ಸುಂದರ ಇದೆ ಎಂದು
ಚಂದಿರ ಬಂದಾನು
ಉಯ್ಯಾಲೆ ಆಡಲು!!
ಮೈಯನು ಮರೆತಿರುವ
ಚಂದಿರ ಸಿಲುಕಿರುವ
ಅಂದದ ಬಲೆಯೊಳಗೆ
ಚಂದದಿ ತಾ ಮಲಗಿ!!
ಜೇಡರ ಹುಳುವೊಂದು
ಬೇಟೆಯ ತಾ ಕಂಡು
ಬಲೆಯಲಿ ಸಿಲುಕಿರುವ
ಚಂದಿರನೆಡೆ ಬಂತು!!
ಇರುಳಿನ ಸೆಲೆಯಲ್ಲಿ
ಹೊಳೆಯುವ ಮೈ ಕಾಂತಿ
ಚಂದದಿ ಮಲಗಿರುವ
ಸುಂದರ ಬಲೆಯೊಳಗೆ!!
ಚಂದಿರನನು ಕಂಡಾಗ
ಶುರುವಾಯಿತು ಅನುರಾಗ
ಜೇಡರದು ಒಂದೇ ಕೋರಿಕೆ
ನೀ ಬೇಕು ನನಗೀಗ!!
ದಿಗಿಲಾದ ಚಂದಿರಗೆ
ನೆನಪಾಯಿತು ಆ ಬಾನು
ಮುಗಿಲಿಗೂ ಮಿಗಿಲಾದ
ಉಯ್ಯಾಲೆ ಬೇಕೇನು!!
ತಾರೆಗಳ ಕಥೆ ಹೇಳಿ
ಹಿಂದಿರುಗುವ ಮಾತಿಟ್ಟು
ಕಾಯುವಂತೆ ಹೇಳಿ ಹೊರಟ
ಚಂದಿರನು ನೆಪವೊಡ್ಡಿ!!
ಚಂದಿರನ ಮಾತ ನಂಬಿ
ಕಾಯುತಿರುವ ಜೇಡರಗೆ
ಅವನ ಆಟ ತಿಳಿದಿಲ್ಲ
ಅವನು ಬರನು ಹಿಂದಿರುಗಿ!!
- ಪಿ.ಜಿ.ಜ್ಯೋತಿ
02 Oct 2018, 02:42 pm
Download App from Playstore: