ನನ್ನ ಬದುಕು

ರಾತ್ರಿ ಆದಷ್ಟೂ ಬೇಗನೆ ಮಲಗಿ
ಮುಂಜಾನೆ ಬೇಗನೇ ಎದ್ದುಬಿಡುವ
ನಿರ್ಧಾರವ ನಾನೆಂದೂ ಮಾಡುವುದಿಲ್ಲ
ಪ್ರತಿದಿನ ಬೇಗನೇ ಏಳುವ
ಆ ಹೆಂಗಸರು
ರಾತ್ರಿ ಮಲಗುವ ತನಕ
ಏನೇನು ಮಾಡಬೇಕಾಗಿದೆಯೋ
ಅದು ನನಗೆ ತಿಳಿಯದ್ದೇನಲ್ಲ

ನನ್ನನ್ನು ಹೀಗೆ ಪಂಜರದೂಳಗೆ
ಕೂಡಿಸಿಟ್ಟಾಗಲೂ
ಈ ಪುಟ್ಟ ವ್ಯಾಪ್ತಿಯಲ್ಲೂ
ನಾನು ಬದುಕುವುದು
ನನ್ನ ಮನದ ಇಚ್ಛೆಯಂತೆಯೇ!
'ಸ್ವತಂತ್ರವಾಗಿ ಬದುಕಲು
ವಿಶಾಲ ಜಗತ್ತೇ ಬೇಕು' ಎಂದು
ಎಂದೂ ಅನಿಸುವುದಿಲ್ಲ ನನಗೆ!

ಹೊರಗೆಲ್ಲ ಅಡ್ಡಾಡಿಕೊಂಡಿರುವ
ಆ ಮಹಿಳೆಯರ ಕಂಡಾಗ
ಮನಕೆ ಖೇದವೆನಿಸುವುದು
ಯಾರ ಆಜ್ಞೆ, ಆಣತಿಗಳ
ಒಂದು ಹೆಜ್ಜೆಯಾದರೂ ಮೀರಲಾಗದ
ಅವರ ಗುಲಾಮಿತನವ
ಕಂಡು ಮನಕೆ ಖೇದವೆನಿಸುವುದು

ಬಲ್ಲೆ ಈ ಪಂಜರದೊಳಗಿರುವವಳ ಕಂಡು
ಮುಸು ಮುಸು ನಗುತ್ತೀರಿ
ನಾನಾದರೂ
ಪಂಜರದ ಪುಟ್ಟ ವ್ಯಾಪ್ತಿಯ ಇತಿಮಿತಿಗಳಲೂ
ಹೀಗೆ ಸಡ್ಡು ಹೊಡೆದು ಬದುಕಬಹುದು
ಎಂಬ ಪ್ರಾಯೋಗಿಕ ಮಾದರಿ ತೋರುತ್ತಿದ್ದೇನಷ್ಟೇ

ಪಂಜರವ ತೊರೆದುಹೋದ
ಅವೆಷ್ಟೋ ಹಕ್ಕಿಗಳ ನಾನು ಕಂಡೆ
ಹಾಗೆ ಹಾರಿದವುಗಳಲಿ
ಕೆಲವು ಮತ್ತೊಂದು ಪಂಜರದ
ಖೈದಿಯಾದವು
ಮತ್ತೆ ಕೆಲವು ಬೆಕ್ಕುಗಳ ಪಾಲಾದವು!

ನನ್ನ ಪೀಹೂ ನನಗೆ
ಅದೆಷ್ಟೋ ಪಾಠಗಳ ಕಲಿಸುತ್ತಿದ್ದಳು
ನಾನು ಕೊಟ್ಟ ಹಣ್ಣುಗಳಲಿ
ಒಂದನ್ನು ಬಿಸುಟು ಮತ್ತೊಂದನು
ತಿನ್ನುತ್ತಿದ್ದಳು
ತನಗೆ ಬೇಕೆನಿಸಿದಾಗ ಹಾಡಿಕೊಳ್ಳುತ್ತಿದ್ದಳು
ತನಗೆ ಬೇಕನಿಸಿದಾಗೊಮ್ಮೆ
ಹಾರಿಯೂ ಹೋದಳು
ತನಗೆ ಬೇಕೆನಿಸಿದರೆ
ಹಿಂದಿರುಗಿಯೂ ಬಂದಾಳು

ದೀಪಗಳನು
ಬೆಳಕು ಹೊರಗಿಣುಕಲು ಬಿಡದ ಹಾಗೆ
ಅದೆಷ್ಟು ಕಾಲ
ನಿಮ್ಮ ಬೊಗಸೆಗಳಲಿ ಬಚ್ಚಿಡುವಿರಿ?
ಉರಿವಷ್ಟೂ ಕಾಲ
ನಿಮ್ಮ ಅಂಗೈಗಳನೇ ಸುಟ್ಟೀತು
ಅಥವಾ
ಗಾಳಿ ಸೋಕದೇ ಸತ್ತು ಹೋದೀತು
ನಿಮಗೆ ಇರುವುದು ಎರಡೇ ಆಯ್ಕೆ
- ಕಾದಂಬಿನಿ

- ಕಾದಂಬಿನಿ

05 Oct 2018, 10:49 pm
Download App from Playstore: