ಅಗಲಿದ ಮಗು

ನವಮಾಸಗಳೊತ್ತು ತನ್ನಲ್ಲಿ ಕರುಳ ಕುಡಿಯ ಕಾಣದೇನೆ ಭೂತಾಯಿ ಕಸಿದುಕೊಂಡಳು ತನ್ನ ಮಗುವನ್ನು ಮುದ್ದಾಡುವ ಆಸೆಯಾಗಿ.

ಹಸಿಮೈಯ ಬಿಸಿ ಇನ್ನು ಆರಿಲ್ಲ ತನ್ನ ಒಡಲು ತಾನಿನ್ನೂ ಒಪ್ಪಿಲ್ಲ ಒಂದೇ ಜೀವ ತಾನೆಂದು, ಮಗುವು ತನ್ನಲ್ಲಿನ ಭಾಗ ಅಲ್ಲವೆಂದು, ಅಷ್ಟರಲ್ಲೇ ಕಳುವಾಯಿತೆ ಅವಳ ಪ್ರತಿರೂಪದ ಛಾಯೆಯೊಂದು ಸಾವು ಕವಿದ ಕತ್ತಲಲ್ಲಿ!

ಹೊಟ್ಟೆಯೊಳಗೆ ಮಗು ಒದ್ದ ಕ್ಷಣ ನೋವಿನಲ್ಲೂ ನಗುವು ಕಂಡಳು ತನ್ನ ಕೈಯಿಂದ ತಾಕುತಿರಲು ಅವನ ಪಾದ ಸ್ಪರ್ಶವ.

ತೊಳಲಾಟಕೆ ನಕ್ಕು ಬೈದಳು ತುಂಟ ನೀನು ಅಪ್ಪನಂತೆ ಸುಮ್ಮನಿರು ಸದ್ದು ಮಾಡದೆ ಒಪ್ಪೋತ್ತು ತಾಳಲಾರೆ ಹಸಿವಿಗೆ ಎಂದು.

ಉಸಿರಲ್ಲೇ ಬಚ್ಚಿಟ್ಟಳು ಮನ ಹೇಳಿದ ನೂರು ಹೆಸರು ಮಗುವಿಗಿಡಲು ನಾಮಕರಣದಲ್ಲಿ ಸಂಭ್ರಮದಲ್ಲಿ ಅಕ್ಷರಗಳು ಬರೆಸಲು ಅಕ್ಷರಾಭ್ಯಾಸದಲ್ಲಿ.

ಸಂಭಾಷಣೆ ಇಲ್ಲದೆ ತಾಯಿಯರಿತ ತನ್ನ ಮಗುವಿನ ನೋವು ನಲಿವು ಅರಿಯದಾದನು ಆ ಭಗವಂತ ಅವಳ ಒಡಲಿನಿಂದ ಮಡಿಲು ಸೇರುವಷ್ಟರಲ್ಲಿ ಕಿತ್ತುಕೊಂಡನು ಅವಳ ಆಸೆಗಳ ಇತ್ತ.

ಯಾವ ತೀರಿಸದ ಅರಕೆ ನಿನ್ನ ಕಸಿದುಕೊಂಡಿತು ಒಂದು ಮಾತು ಹೇಳದೇನೆ ದೂರಮಾಡಿತು, ದೂರದೂರಿನವನಲ್ಲ ನೀನು ನನ್ನ ರಕ್ತ ಮಾಂಸಗಳ ಮುದ್ದೆ ನೀನು, ತುತ್ತನಿಟ್ಟೆ ನನಗಸಿವಿಲ್ಲದಿದ್ದರೂ ಮುತ್ತನಿಡುವ ವೇಳೆಯಲ್ಲಿ ಮಾಯವಾದೆಯಾ ನನ್ನ ಋಣವ ತೀರಿಸದೆ ನನ್ನ ತೊರೆದೆಯಾ..!

- ಚುಕ್ಕಿ

12 Nov 2018, 08:42 pm
Download App from Playstore: