ತೊಟ್ಟಿಲು ತೂಗಲು

ತೊಟ್ಟಿಲೊಂದು ಅತ್ತಿತ್ತ ತೂಗಲು
ಮನೆ ತುಂಬ ಕಂದ ನಡೆದಾಡಲು
ಎಲ್ಲೆಲ್ಲೂ ನಗುವೇ ತುಂಬಿದೆ
ಮನೆ ಮನದಾಗ ಸಂತಸ ಉಕ್ಕಿದೆ

ನೀ ಮಡಿಲ ಸೇರುವ ಮುನ್ನ
ಈ ಜೀವಕೆ ಸಾವೇ ಚೆನ್ನ
ಬಂಜೆ ಎಂದು ಕಾಡಿದರೆಲ್ಲ ನನ್ನ
ಮನೆಯವರಿಗೂ ಬೇಡವಾಗಿದ್ದೆನೊ ಚಿನ್ನ

ನನ್ನದೋ ಬರಡು ಭೂಮಿಯ ಮನ
ನಿನ್ನಪ್ಪನ ಎದೆಯಲಿ ಬರಿಯ ಮೌನ
ನಿನ್ನಜ್ಜಿ ಅಜ್ಜನ ಕಣ್ಣಲಿ ನೋವಿನ ಯಾನ
ಎಲ್ಲರೊಳಗೂ ನಿನಗಾಗಿಯೇ ಧ್ಯಾನ

ಎದುರು ಮನೆಯ ಕಂದನ ನೋಡಿ
ಬೈಗುಳ ತಿಂದಿದ್ದೆ ಮುದ್ದು ಮಾಡಿ
ಖಾಲಿ ಖಾಲಿ ಮಡಿಲು ಕಾಡಿ
ಹರಿಸಿದ್ದೆ ಮುಗಿಯದ ಕಣ್ಣೀರ ಕೋಡಿ

ನೀ ಸೇರಿದೆ ವರದಂತೆ ಮಡಿಲಿಗೆ
ಹೊತ್ತು ತಂದೆ ತಾಯ್ತನದ ಕೊಡುಗೆ
ಸುಖ ಶಾಂತಿ ನೆಮ್ಮದಿ ಎಲ್ಲರ ಪಾಲಿಗೆ
ಕಾಯುವೆ ಬಿಸಿಯುಸಿರು ತಾಗದಂತೆ ನಿನಗೆ

- ಶ್ರೀಕಾವ್ಯ

21 Nov 2018, 05:59 pm
Download App from Playstore: