ಹಿಂದಿರುಗಿ ಬಿಡು ಚಂದಿರ
ನಿನ್ನ ಕಂಡೊಡನೆ
ಅದೇನೊ ಹೊಸ ಹುರುಪು
ಅದಮ್ಯ ಚೈತನ್ಯ ಎನ್ನೊಳಗೆ
ಚಿಗುರೊಡೆದು ಬಿಡುತ್ತಿತ್ತು
ಅದೆಲ್ಲಿರುತ್ತಿದ್ದವೊ ಪದಗಳು
ಅದೆಲ್ಲಿಂದ ಹರಿದು ಬರುತ್ತಿತ್ತು
ಮನದುಂಬಿ ಭಾವ ಲಹರಿ
ಬರೆದಷ್ಟು ನವ ನವೀನನಾಗಿ
ಮಡುಗಟ್ಟಿದ ಮೌನ
ಅದೇಗೆ ನಿನ್ನ ಕಂಡೊಡನೆ
ಸಂಭಾಷಣೆ ಆಗಿಬಿಡುತ್ತಿತ್ತೊ
ಎದೆಭಾರ ಮಂಜಿನಂತಾಗಿಬಿಡುತ್ತಿತ್ತೊ
ಹೋ ಅದೆಷ್ಟು ಮಾತು
ಅದೆಷ್ಟು ಸರಸ, ವಿರಸ
ಮನಸಿಗೆ ಬುದ್ಧಿಗೆ ದಕ್ಕಿದ್ದೆಲ್ಲ
ನಿನ್ನ ಕಾಂತಿಯೊಳಗೆ ಸೆರೆ
ಎಷ್ಟು ಜನ ಹೇಳಿದ್ದಿಲ್ಲ ಕಾಡಿಸಿದ್ದಿಲ್ಲ
ಇನಿಯನಿಗಾಗಿಯೇ ಇದನ್ನೆಲ್ಲ
ಬರೆದದ್ದೆಂದು ಯಾರವನು
ಮನಸ ಕದ್ದವನೆಂದೆಲ್ಲ
ನಿನ್ನ ಪುಟ್ಟ ಪುಟ್ಟ ಅಗಣಿತ
ಗೆಳೆಯರೆಲ್ಲ ಅದೆಷ್ಟು
ಮುನಿದಿದ್ದರೊ ನೊಂದಿದ್ದರೊ
ನನ್ನ ನಿನ್ನ ಮುಗಿಯದ ಮಾತು ನೋಡಿ
ಅದೆಷ್ಟು ಕೋಪ ತೋರಿರುವೆನೊ
ಮಗುವಿನಂತೆ ಮುದ್ದಿಸಿರುವೆನೊ
ನಾನೆ ಮಗುವಿನಂತೆ ಅತ್ತಿರುವೆನೊ
ನಿನ್ನ ಶಾಂತ ಮೌನ ಕಾಂತಿ ನಗು
ಆಗೆಲ್ಲ ಸಂತೈಸಿದಷ್ಟು ಯಾವುದಿಲ್ಲ
ಅದೇನಾಯಿತೀಗ ಮುಗಿಯದ ಮಾತು
ಹೊರ ಬರದೆ ಬಂಧಿಯಾಗಿಬಿಟ್ಟಿದೆ
ನೀನೆ ಬದಲಾದೆಯೋ ಇಲ್ಲ
ನಾನೇ ಬದಲಾದೇನೊ ತಿಳಿಯದು
ಮತ್ತೊಮ್ಮೆ ಆ ದಿನಗಳು ಬೇಕಿದೆ
ಬಯಲಲ್ಲಿ ಕಲ್ಲು ಬೆಂಚಿನ ಮೇಲೆ
ಕುಳಿತು ನೀಲಾಗಸವ ದಿಟ್ಟಿಸುತ್ತ
ನನ್ನೊಳಗು ನನಗರಿವಿಲ್ಲದಂತೆ
ಬಯಲಾಗಬೇಕಿದೆ
ಮೌನವನ್ನೆಲ್ಲ ನಿನ್ನ ಮಡಿಲೊಳಗಿರಿಸಿ
ನಿನ್ನ ಕಾಂತಿಯ ಪ್ರಶಾಂತತೆಯ
ನನ್ನ ಮನದೊಳಗೆ ಭದ್ರ ಪಡಿಸಿ
ಮುಗುಳ್ನಗುವ ಹೊತ್ತು ನಲಿವ
ಕ್ಷಣಗಳು ಮತ್ತೆ ಬೇಕಿವೆ ಚಂದಿರ
- ಶ್ರೀಕಾವ್ಯ
05 Dec 2018, 09:32 pm
Download App from Playstore: