ಹೊದಿಕೆ

ಬೀಜವಾಗಿ ಭೂಮಿಗೆ ಬಿದ್ದು
ಅರಳೆಯಾಗಿ ಬೆಳೆದು
ಹತ್ತಿಯಾಗಿ,ನೂಲಾಗಿ
ಪರಿವರ್ತನೆಯ ಗಾಳಿಯಲ್ಲಿ
ಮಾರುಕಟ್ಟೆಯ ದೂಳಿನಲ್ಲಿ
ದಳ್ಳಾಳಿಗಳ ಹಗ್ಗ-ಜಗ್ಗಾಟದಲ್ಲಿ
ನಲುಗಿ ಸೇರುವೆನು ಮಗ್ಗದ ಮಡಿಲಲ್ಲಿ

ಹಲವು ವರ್ಣಗಳ ತಾಳಿ
ಸಾಗುವೆನು ವರ್ತಕನ ಬೆನ್ನೇರಿ
ದರಗಳೇರಿಳಿತದ ತೇರನೇರಿ
ಸ್ಥಿರನಾಗುವೆ ಗಿರಾಕಿಗಳ ಸೇರಿ
ಮುಗಿಸುವೇ ನನ್ನೀ ಅಲೆದಾಟದ ದಾರಿ

ದರ್ಜಿಯ ಮನೆಯಲಿ
ಸರ್ಜರಿಗೊಳಗಾಗಿ
ಒಡೆಯನ ಅಂಗವ ಕಾಯ್ದು
ಮೈಲಿಗೆಯಾಗಿ
ಮಡಿಯಾಗುವೆ ಮಡಿವಾಳ್ತಿಯ ಕೈಯಲಿ

ಇದೇ ಜೀವನದ ನಿಯಮ
ನಿಮಗಾಗಿ ಸವಿಸುವೆ ನನ್ನೀ ಜನುಮ
ಕಳೆಗುಂದಿದಾಗ ತುಳಿಯುವಿಯಿರಿ ನನ್ನ
ಮರೆಯದಿರಿ,ಈ ಭೂತ ಬಿಡದು ನಿಮ್ಮನ್ನ





ಶಾರದ

- ಶಕುಂತಲಾ

04 Jan 2019, 06:53 am
Download App from Playstore: