ಮೌನವಾಗದಿರು ಮುಗುದೆ

ಮೌನವಾಗದಿರು ಮುಗುದೆ
ಮರೆತು ಮಾತುಗಳ ಬೇಗುದಿ
ಮನದ ಆಳಕ್ಕೆ ಇಲ್ಲ ಏಣಿ
ಮುಂದಾಗುವುದಕ್ಕೆ ಹೇಳುವರಿಲ್ಲ ಕಣಿ
ಮನದ ಚಿಂತೆಗಳನು ಇಟ್ಟು
ಸಲಹದಿರು ಮನದೊಳಗೆ,
ಚಿಂತೆಗಳ ಕಸವ ಗುಡಿಸಿ
ಮಾತುಗಳಾಗಿ ಚೆಲ್ಲು ಹೊರಗೆ.
***
ನಡು ಇರುಳಲಿ
ವಿರಹದುರಿಯಲಿ ಬೆಂದು ನಾ ನೊಂದೆ
ಒಂಟಿ ಚಂದ್ರನಿರುವನೇನೋ
ಎಂದುಕೊಂಡು ಹೊರಗೆ ನಾ ಬಂದೆ..
ಅವನೋ ಪ್ರೇಮಗಳ್ಳ,
ಸಿಕ್ಕಳೇನೋ ಅವನಿಗೂ ಚೆಲುವಿ
ಕಾಣೆಯಾಗಿರುವ ಬಾನಿನಿಂದ.
***
ಬೇಸಿಗೆಯ ಈ ನಟ್ಟಿರುಳಲಿ
ನಿದ್ರೆ ಅಳಿದು ಬಸವಳಿದಿರಲು
ಬಿಸಿ ಗಾಳಿ ಸುಡುತಿಹುದು
ಹೊರಮೈಯ್ಯ..
ಒಳಗೂ ತಂಪಿಲ್ಲ,
ಕುದಿವ ನಿನ್ನ ನೆನಪ ಪಾಕ
ಸುಡುತಿಹುದು ಮತ್ತೆ ಮತ್ತೆ ತಿವಿದು
ಒಳ ಹೃದಯ!

- ಶ್ರೀಗೋ.

17 Apr 2019, 12:04 am
Download App from Playstore: