ಮುತ್ತಿನ ಕೊಯ್ಲು..
ಮುತ್ತಿನ ಕೊಯ್ಲು ನೆಡೆಯುತ್ತಿದೆ
ತುಟಿಯ ಅಂಚಲಿ, ಮೀಸೆ ಚುಚ್ಚಿದರೆ
ಕೋಪಿಸಿಕೊಳ್ಳುವೇ ಮುದ್ದಿಸು
ಮೆದುವಾಗಿ ಉಸಿರ ಬಿಸಿಯಲಿ,
ಸೋತು ನಿನ್ನವಳಾಗುವೆ ಮೆಲ್ಲ
ಕರಗಿ ಚಂದಿರನ ಕಣ್ತಪ್ಪಿಸಿ ನಡುರಾತ್ರಿಯಲಿ.
ಕೊರಳ ಇಳಿಜಾರಿಗೆ ತುಸು ಹೆಚ್ಚಿಗೆ
ನಿನ್ನ ಸನಿಹ ಬೇಕೆನಿಸಿದೆ,
ಸಾವಿನಾಚೆಗಿರುವ ಸುಖವ
ಸವಿವರವಾಗಿ ತಿಳಿಸು ಅದಕೆ
ತಡವರಿಸದೆ ನನ್ನವನಾಗಿ.
ಬಯಕೆಗಳಿಗೆ ಮಿತಿಯೊಡ್ಡಿ
ಮೌನದ ಮುಸುಕು ತೊಡಿಸಿ
ಸಾಕಾಗಿದೆ, ನೂರಾರು ಕವನದ
ಸಾಲು ನೀನಾಗಿ ನನ್ನ ಸೇರಬೇಕಿದೆ.
ಅಧರ ಸುಧೆಯ ಸಿಹಿ ಹೆಚ್ಚಾಗಿದೆ,
ಒಲವುಣಿಸಿ ನಿನ್ನ ತುಟಿಗೆ
ಮತ್ತೆ ಸಿಹಿಯ ತುಂಬಿಕೊಳ್ಳಬೇಕಿದೆ.
ಕದ್ದು ಕೊಡುವ ಮುತ್ತುಗಳು ಸಾಲದಾಗಿವೆ
ಸಾಲವಾಗಿ ಪಡೆದ ಕನಸಿಗೆ ನಿನ್ನ ಜೊತೆ
ಸೇರಿ ಜೀವ ತುಂಬಬೇಕಿದೆ.
- ಚುಕ್ಕಿ
04 May 2019, 10:15 pm
Download App from Playstore: