ಅಗ್ನಿ
ಪೂಜೆಗೆಲ್ಲ ಮೊದಲುಗೈವ,
ಕೊಳೆಯ ತೊಳೆದು ಪಾಪ ಕಳೆವ
ಆಗಸದಗಸ ಅಗ್ನಿ!1!
ಬಡವ ಬಲ್ಲಿದ ಭೇದವಿಲ್ಲದ ಸಮಾನತಾವಾದಿ ಅಗ್ನಿ, ಚಾತುರ್ವರ್ಣವನೂ ಸಹಿಸದೆ ದಹಿಸುವ
ಸಮಾಜವಾದಿ ಅಗ್ನಿ!2!
ಜೀರ್ಣಕ್ರಿಯೆಗೆ ಕಾರಣನಾಗಿ,
ಆಹಾರವನು ಅಪೋಷಣೆಗೈದು,
ಪೋಷಣೆಯನು ಪೋಷಿಸುವ
ಜಾಠರಾಗ್ನಿ!3!
ಪಂಚಭೂತಗಳನು ಸಂಸ್ಕರಿಸಿ,
ಧಾತುಗಳನು ದೃಡೀಕರಿಸಿಸುವ ಭೂತಾಗ್ನಿ, ಜೀವಸಂಕುಲದ ಸಂತತಿಯ ವೃದ್ಧಿಸುವ
ಕಾಮಾಗ್ನಿ!4!
ಸಪ್ತವರ್ಣವ ತನ್ನೊಳಿಟ್ಟು,
ಕೆಂಪು ಅಶ್ವವನೇರಿ ಹೊರಟ ಅಗ್ನಿ,
ಸಮುದ್ರದಲ್ಲಿ ಬಡಬಾಗ್ನಿ,
ಪರ್ವತನ ಹೊಟ್ಟೆಯಲ್ಲಿ
ಜ್ವಾಲಾಗ್ನಿ!5!
ಅಂಧರ ಅಂಧಕಾರವ ದೂರ ಸರಿಸಿ
ಕಿಚ್ಚನಚ್ಚಿ ಸ್ಥೈರ್ಯ ನೀಡುವ ಜ್ಞಾನಾಗ್ನಿ,
ಧೀ, ಧೃತಿ, ಸ್ಮೃತಿಗಳಲಿ ಚೇತನ ತುಂಬುವ ಚೈತನ್ಯದ
ಚಿಲುಮೆ ಈ ಅಗ್ನಿ!6!
ಜೀವನಯಾತ್ರೆಯ ಅಂತ್ಯದಲೂ ಪ್ರೀತಿಯಿಂದ ಸ್ಪರ್ಶಿಸಿ, ರೋದಿಸಿ, ಸಾಂತ್ವನ ಹೇಳಿ ಕೈ ಹಿಡಿದು ಕರೆದೊಯ್ಯುವ ಜೀವದ
ನಿಜ ಗೆಳೆಯನೀ ಅಗ್ನಿ!7!
-ಡಾ! ಸಿ.ಮುರಳೀಧರ
https://muralinada.wordpress.com
17, ಮೇ, 2019
- ಡಾ!ಸಿ.ಮುರಳೀಧರ
10 Jul 2019, 10:22 pm
Download App from Playstore: