ದಾಂಪತ್ಯ..

ಪುಟ್ಟ ಕಂದನ ಕೂಗಿ ಕೇಳಿತು
ಅಮ್ಮ ಎಂದು ಉಸಿರ ಸದ್ದಲಿ
ಅಮ್ಮನ ನಗುವು ಹೇಳಿತು ಅಪ್ಪ
ನೀನೆಂದು ಕಣ್ಣ ಅಂಚಲಿ.

ತಾಯಿ ನೀನಾಗುವೆಯೆಂದು
ಮಗುವಂತೆ ಲಾಲಿಸಿದೆ
ನನ್ನ ಪುಟ್ಟ ಪುಟ್ಟ ಆಸೆಗಳನ್ನೆಲ್ಲಾ
ವೇಳೆಯ ಪರಿವೆ ಇಲ್ಲದೆ ಈಡೇರಿಸಿದೆ.

ಮುದ್ದು ಗೊಂಬೆಯ ಅಳುವ ಸದ್ದು ಕೇಳಿ
ಹರುಷದಿ ಸಂಭ್ರಮಿಸಿದೆವು ತಂದೆ-ತಾಯಿ
ನಾವೆಂದು ಹೊಸ ಅಥಿತಿಯ ಸ್ವಾಗತಿಸುತ
ಮಮತೆಯ ಮಡಿಲಿಗೆ.

ಸೊಗಸು ಕಂಡ ಚೆಲುವೆ ನಾನು
ಅಮ್ಮನಾಗಲು ನನ್ನ ಸೌಂದರ್ಯ
ಧಾರೆ ಎರೆದೆನು, ಮಗುವಿಗೊಂದು ಪುಟ್ಟ
ಮನೆಯ ಮಾಡಲು ಒಡಲ ಆಸರೆ
ನೀಡಿ ನಲಿದೆನು.

ಖಾಲಿಯಾದ ಮನೆಯಲ್ಲಿ ನಿಶಬ್ದ ತುಂಬಿದೆ
ಮಗುವು ಬಿಟ್ಟು ಹೋದ ಹೆಜ್ಜೆಯ ಗುರುತು
ಅವಳ ನೆನಪಂತೆ ನನ್ನ ದೇಹ ಹರಡಿದೆ.

ಆಡಿಕೊಳ್ಳಬೇಡವೋ ಗಂಡ ಸೌಂದರ್ಯ
ಕಳೆದು ಹೋಯಿತೆಂದು ಜೋತು
ಬಿದ್ದ ಎದೆಯು ನಿನ್ನ ಮಗಳ ಹಸಿವ
ನೀಗಿಸಲು ಊಟವಾಗಿದೆ, ಕಪ್ಪು ಕಳೆಗಳ
ಸುಕ್ಕು ಚರ್ಮವು ಮಗುವಿನ ಮುದ್ದಾದ
ರೂಪಕೆ ಮಾಂಸವಾಗಿದೆ.

ಕಿರುಬೆರಳ ಹಿಡಿದ ಕ್ಷಣವೇ ಸರ್ವಸ್ವ ನೀನಾದೆ
ಕಡೆವರೆಗೂ ನಿನ್ನೊಡನೆ ನಡೆವ ನೆರಳಾಗಿ ನಾ ನಿನ್ನ ಮಡದಿಯಾದೆ.

- ಚುಕ್ಕಿ

11 Aug 2019, 04:37 am
Download App from Playstore: