ಗಿಲ್ಲ ಗಿಲ್ಲದ ಗೆಜ್ಜೆ
ಗಿಲ್ಲ ಗಿಲ್ಲದ ಗೆಜ್ಜೆ
ನೀನಿಡಲು ಹೆಜ್ಜೆ
ಝಣ ಝಣ ಎನುತಿದೆ
ಈ ಮನೆಯ ಒಳಹೊರಗೆ!!
ನೀನೊಮ್ಮೆ ನಗಲು
ಕಳೆದಂತಿದೆ ಇರುಳು
ಬಾನಿನ ಚಂದ್ರಿಕೆಯು
ಈ ಮಡಿಲ ತುಂಬಿರಲು!!
ಚಿನ್ನ ರನ್ನ ಎಂದು
ನಾ ಮುದ್ದಿಸಲು ನಿನ್ನ
ಸಂತಸವೇ ನಿನಗೆ
ನನ್ನೊಡನೆ ಆಡಲು!!
ಈ ತಾಯ ಬಾಳಿಗೆ
ನೀನಾದೆ ದೀವಿಗೆ
ಲಾಲಿಸುವೆ ಕಂದಾ
ನೀ ತಂದೆ ಆನಂದ!!
ಆಕಾಶ ಲೋಕದ
ಓ ದೇವ ಕನ್ನಿಕೆಯೇ
ಮಗುವಾಗಿ ಬಂದಿರುವೆ
ಅಮ್ಮ ಎನುತಿರುವೆ!!
ನಿನ್ನ ತೊದಲು ನುಡಿ
ನನಗದೇ ಸಿರಿ ನುಡಿ
ಮಾತಾಡು ಓ ನನ್ನಯ
ಮುದ್ದಿನ ಅರಗಿಣಿ!!
ಅಡವಿಯ ಪೊಡವೆಯ
ಸಂಪಿಗೆ ಮರದಲಿ
ಅರಳುವ ಹೂವಿನ
ಹಾಗೆ ನೀ ಘಮಿಸುವೆ!!
ಸಾಗರದ ಆಳದ
ಮುತ್ತನು ತಂದು ನಾ
ಸಿಂಗರಿಸುವೆ ನಿನ್ನ
ಕರುಳಿನ ಕಮಲವೇ!!
- ಪಿ.ಜಿ.ಜ್ಯೋತಿ
25 Aug 2019, 11:25 am
Download App from Playstore: