ಕಂಡೆನಾ ಶ್ಯಾಮನ...

ಕಂಡೆನಾ ಶ್ಯಾಮನ
ಮುರಳಿ ಮೋಹನ
ಮಾಧವ ಮುಕುಂದನ
ಹೃದಯ ಕಾಯುವ ಗೋಪಾಲನ

ಮುಗ್ಧ ಮನವ ಗೆದ್ದು
ಮೃದು ಪ್ರೇಮವ ಮೆದ್ದು
ನಿದಿರೆ ಕನಸುಗಳೆಲ್ಲ ಕದ್ದು
ಏನು ತಿಳಿಯದವನಂತೆ ನಟಿಸುವವನ

ತುಟಿಯಂಚಲಿ ನಗುವ ಹರಿಸಿ
ಕಣ್ಣಂಚಲೆ ಒಲವ ಸ್ಫುರಿಸಿ
ಮಾತಲೆ ಮುರಳಿ ನುಡಿಸಿ
ಮೋಡಿ ಮಾಡಿ ಸೆಳೆಯುವವನ

ಕುಂಟು ನೆಪವ ತೋರಿ
ಬಳಿಗೆ ಬಂದು ಜಾರಿ
ತನುವ ಸೋಕಲು ನಾರಿ
ಅವಳನೇ ಅಪಹರಿಸುವ ತುಂಟನ

ನಲುಮೆಯಲಿ ಕೈ ಹಿಡಿದು
ಹುಸಿಮುನಿಸಲಿ ಮನವ ಮಿಡಿದು
ನೋವುನಲಿವಿನಲಿ ಬಾಳ ಹೊಸೆದು
ಹೆಜ್ಜೆಹೆಜ್ಜೆಗೆ ಜೊತೆಯಾಗಿ ಹೊರಟವನ

ಕಂಡೆನ ಶ್ಯಾಮನ
ಮುರುಳಿ ಮೋಹನ
ಮಾಧವ ಮುಕುಂದನ

- ಶ್ರೀಕಾವ್ಯ

06 Sep 2019, 04:41 pm
Download App from Playstore: