ನನ್ನರಸಿ - ನಿನ್ನರಸಿ
ಆಕಾಶಕ್ಕೊಂದಷ್ಟುದ್ದ ಏಣಿ ಹಾಕಿಸಿ
ಸೂರ್ಯನ ಸ್ವಲ್ಪ ಪಶ್ಚಿಮದಲ್ಲಿ ಕೂರಿಸಿ
ರೌರವ ಬಿಸಿಲಿಗೆ ಟಾಟ ಮಾಡಿ ತಣಿಸಿ
ಗಗನದ ತುಂಬೆಲ್ಲ ತಿಳಿ ಕೆಂಪು ಬಣ್ಣ ಬಳಿಸಿ
ತುದಿಗೆಲ್ಲ ಬೆಳ್ಳಿ ಕಪ್ಪು ಮೋಡಗಳ ಜೋಡಿಸಿ
ಮಳೆರಾಯನ ಅಷ್ಟೊತ್ತು ಇಷ್ಟೊತ್ತೆನದೆ ಕರೆಸಿ
ಹಸಿರು ಎಲೆಗಳ ಮೇಲೆ ಕೂತ ಧೂಳ ತೊಳೆಸಿ
ಕನ್ನಡೀಲಿ ಲಕಲಕ ಹೊಳೆಯೋದ ತೋರಿಸಿ
ಅಲ್ಲಲ್ಲಿ ಬಣ್ಣಬಣ್ಣದ ಹೂವಗಳಲಿ ಅಲಂಕರಿಸಿ
ಹಾದಿ ಬೀದಿಯಲ್ಲೆಲ್ಲ ದೀಪವ ಬೆಳಗಿಸಿ
ಹಕ್ಕಿ ಪಿಕ್ಕಿಗಳ ಗಾನ ಬಜಾನ ಹಾಡಿಸಿ
ಎಳೆ ಐಕ್ಳ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ
ತಂಗಾಳಿ ತಂದು ದಾರಿ ತುಂಬೆಲ್ಲ ಸೂಸಿ
ಚಂದಮಾಮನ ಊಟಕ್ಕೆ ಆಹ್ವಾನಿಸಿ
ಚುಕ್ಕಿಗಳಿಗೆ ಬೆಳಕಿನ ಅಲಂಕಾರ ವಹಿಸಿ
ಎದೆಯೊಳಗೆ ಪ್ರೇಮ ರಂಗಮಂಟಪ ಕಟ್ಟಿಸಿ
ನಿನ್ನ ಸವಿ ಮಾತಿನ ನಿನಾದ ಬಯಸಿ
ಅನುರಾಗದ ಆಲಿಂಗನದ ನೆನಪ ರಮಿಸಿ
ನೀ ಬರುವ ದಾರಿಯಲೇ ನಿನ್ನ ಹರಸಿ
ಕಾದು ಕುಳಿತಿರುವೆ ನಿನಗಾಗಿ ತಪತಪಿಸಿ ನನ್ನರಸಿ
- ಶ್ರೀಕಾವ್ಯ
07 Sep 2019, 06:20 pm
Download App from Playstore: