ಆ ಮಮತೆಯ ಸಂಚಲನ

ಅಮ್ಮ ಎಂಬ ಕೂಗನ್ನು ಮರೆತಿದ್ದೆ ದಶಕದಿಂದ
ಕಾರಣ, ಅಪ್ಪ ಎಂಬ ವಸ್ತುವಿನ ಪ್ರೀತಿಯಿಂದ

ಮರೆತದ್ದು ಅಮ್ಮ ಎಂಬ ಪದವನ್ನಷ್ಟೇ
ಅವಳ ಹಳೆಯ ನೆನಪುಗಳನ್ನಲ್ಲ
ಮರಳಿ ಮರುಕಳಿಸಿದೆ ನೆನಪುಗಳು

ಆಕೆಯ ಜೊತೆ ಕೈ ಹಿಡಿದು ಜಾತ್ರೆಯಲ್ಲಿ ಸುತ್ತಿದ್ದು,
ಆಕೆ ಹೊಡೆದದ್ದು, ಬೈದದ್ದು, ಅತ್ತಿದ್ದು, ಮುತ್ತಿಟ್ಟಿದ್ದು,
ಹಸಿವಾಗುವ ವೇಳೆಗೆ ತುತ್ತಿಟ್ಟಿದ್ದು, ತಿನ್ನದಿದ್ದಾಗ ತಟ್ಟಿದ್ದು,
ಗಾಯಕ್ಕೆ ಮುಲಾಮು ಹಚ್ಚಿದ್ದು, ತಟ್ಟುತ್ತಾ ಮಲಗಿಸಿದ್ದು,
ಸಾಸಿವೆ ಡಬ್ಬದಲ್ಲಿ ಕಾಸನ್ನು ಅಪ್ಪನಿಗೆ ತಿಳಿಯದೆ ಬಚ್ಚಿಟ್ಟಿದ್ದು,
ಕೇಳಿದ ಆಟಸಾಮನು ಕೊಡಿಸಿದ್ದು, ಕೇಳದೆ ತಿಂಡಿ ತಿನಿಸಿದ್ದು,
ಕಡೆಗೆ ಅವಳು ಸತ್ತಿದ್ದು, ಸುಟ್ಟಿದ್ದು..ಹೇಗೆ ಮರೆಯುವುದು??

ಕಾಣದೂರಿಗೆ ಹೇಳದೇ ಪಯಣಿಸಿದಳು
ಏನೂ ಅರಿಯದ ಮಗುವನ್ನು ಬಿಟ್ಟು ಹೋದಳು

ಯಾರ ಜೊತೆ ಜಾತ್ರೆಯಲ್ಲಿ ಸುತ್ತುವುದು?
ಯಾರ ಕೆನ್ನೆಗೆ ಮುತ್ತನಿಡುವುದು?
ಹಸಿದಾಗ, ಬಿದ್ದಾಗ, ಅತ್ತಾಗ, ದಿಕ್ಕೆಟ್ಟಾಗ,
ನೋವಿರಲಿ, ನಲಿವಿರಲಿ ಯಾರಿಗೆ ಹೇಳುವುದು?

ಅವಳ ಕೈ ಹಿಡಿದಾಗ ಆಗುವ ಮಮತೆಯ ಸಂಚಲನ
ಬೇಕಿದೆ. ಮತ್ತೆಂದೂ ಸಿಗದ ಆ ಏಕೈಕ ಸಂಚಲನ

- ಬಿ.ಎಂ.ವಿ

- venkatesh murthy

23 Dec 2019, 05:31 am
Download App from Playstore: