ಹಸಿರ ಭಾವನೆ ನೀ...

ಬರೆದಷ್ಟು ಮುಗಿಯದ
ಸಾಲಿನೊಳಗೆ ನೀ ಬಂದು
ಆಗೊಮ್ಮೆ ಈಗೊಮ್ಮೆ
ಮತ್ತಷ್ಟು ಹೆಚ್ಚಿಸುತ್ತಿರುವೆ
ಬರಹದ ವೇಗವ.

ಮನದಾಳದ ಭಾವನೆಗಳ
ಪೋಣಿಸುತಲಿಹುವೆನು
ಚಂದದ ಅಕ್ಷರದಲಿ
ಆದರೂ ಸಾಲುತ್ತಿಲ್ಲ
ಮಾರುದ್ದದ ದಾರ.

ಸಿಗುತ್ತಿಲ್ಲ ಪದಗಳು
ನಿನ್ನ ವರ್ಣಿಸಲು
ಪರದಾಡುತಿರುವೆನು
ನಿನ್ನಂದಕೆ ಒಂದು
ಉಪಮೆ ನೀಡಲು.

ಮನದ ಕತ್ತಲ ಕೋಣೆಗ
ಬೆಳಕಿನ ನಿನ್ನ ಓಜಸ್ಸು
ದಾರಿ ದೀಪವಾಗಿದೆ,
ದೀಪದ ಬೆಳಕು ಆರದಂತೆ
ಕಾಪಿಟ್ಟುಕೊಳ್ಳುವೆ ನಿನ್ನ.

ನೀನೆಂದರೆ ನನ್ನ ಬರಹದ
ಆದಿ, ಅಂತ್ಯ,ಮಧ್ಯ ಎಲ್ಲವೂ
ಆಗಾಗ ನಗು ಒಂಚೂರು ಅಳು
ಹುಚ್ಚು ಹಿಡಿಸುವ ಮನದ
ಹಸಿರ ಭಾವನೆ ನೀ..

- ಅಕ್ಷತ

04 Feb 2020, 10:33 am
Download App from Playstore: