ಅಧಿಕಾರದ ಅಟ್ಟಹಾಸ
ಸುತ್ತಲು ಮುಸುಕಿದೆ ಗಾಢಾಂಧದ ಕತ್ತಲೆ
ಈ ಕತ್ತಲೆಯೊಳಗೆ ಸಮಾಜವೇ ಬತ್ತಲೆ
ನನಸಾಗಲಿಲ್ಲ ಮಹನೀಯರ ಕನಸು
ಬಡವರು ದೀನರು ಆದರು ಬಲಿಪಶು
ಎಲ್ಲೆಡೆ ಮತಾಂಧತೆ ಜಾತೀಯತೆಯ ಸಾಮ್ರಾಜ್ಯ
ನಿಜವಾಗಿಯೂ ಲಭಿಸಿದೆಯೇ ನಮಗೆ ಸ್ವರಾಜ್ಯ?
ಕಣ್ಬಿಟ್ಟ ಕಡೆಯಲ್ಲೆಲ್ಲ ಕೋಲೆಬಸವಗಳ ಗುಟುರು, ಕಾಕು
ಹಿಂದೆಯೆ ನಡೆದಿದೆ ಗದ್ದುಗೆಯ ಅಹಂಕಾರದ ಪರಾಕು
ಹಿಂಬಾಲಕರಿಗೆಲ್ಲ ಅಧಿಕಾರದ ರಕ್ಷಾ ಕವಚದ ಬಾಳು
ರಕ್ಷಕರೆಲ್ಲಾ ಭಕ್ಷಕರಾಗಿ ಎಂಜಲಿಗೆ ದೇಹಿಯೆನ್ನುವ ಗೋಳು
ನೋಟ ಬೀರಿದಲ್ಲೆಲ್ಲಾ ನಾನು ನನ್ನದೆ!
ನನ್ನ ಬಿಟ್ಟು ಜಗದಲಿ ಏನಿದೆ?
ಕ್ಷಣಕ್ಷಣಕೂ ಬಲಿಯುತಿದೆ ಅದ್ವಿತೀಯನಾಗುವ ಸ್ವಾರ್ಥ
ಸಾವಿರ ಪ್ರಾಣಗಳುಸಿರುಗಟ್ಟಿದರು ಸರಿಯೇ,
ದೇಶವನ್ನೆ ದೋಚಿ ಮಾರುವುದಾದರೂ ಸರಿಯೇ
ಎಡಬಿಡದೆ ನಡೆದಿದೆ ಅತಿಕ್ರಮ ಅತ್ಯಾಚಾರ
ಸಿಕ್ಕಿದ್ದನ್ನೆಲ್ಲ ಅಗೆದು ತೆಗೆದು ಬಗೆದು ಸಿಗಿದು ತಿನ್ನುವಷ್ಟು
ಇವರ ಕಣ್ಣಿಗೆ ಬಿದ್ದು ಸತ್ತವರೆಷ್ಟೋ? ಸೊರಗಿದವರೆಷ್ಟೋ?
ತನ್ನನ್ನೇ ಅಡವಿಟ್ಟು ಗಂಟು ಕಟ್ಟಿಕೊಂಡವರೆಷ್ಟೋ?
ಆಚಾರದ ನೆರಳಲ್ಲಿಯೇ ಅನಾಚಾರ
ಅಡಿಯಡಿಯಲ್ಲಿಯೂ ಆವರಿಸಿದೆ ಭ್ರಷ್ಟಾಚಾರ
ಇನ್ನೆಲ್ಲಿಹುದು ಸುಸಂಸ್ಕೃತಿಯ ಶಿಷ್ಟಾಚಾರ
ನಡೆದಿದ್ದು, ನಡೆಯುವುದೆಲ್ಲ ಅಗೋಚರ
ಹೆಜ್ಜೆ ಇಟ್ಟಲ್ಲೆಲ್ಲ ಬರೀ ಆಶಾಭಾವದ ಸೋಗು
ಎಂದಿಗೂ ನಿಲ್ಲದು ನೊಂದವರ ಕೂಗು
ನೊಂದವರ ನಿರ್ಗತಿಕರ ಹಾಹಾಕಾರ
ತಿರುಕನ ಕನಸೇ ಇದಕೆಲ್ಲ ಪರಿಹಾರ
ಪ್ರತಿ ನುಡಿಯಲ್ಲೂ ದೇಶದ ಬೆನ್ನೆಲುಬು ರೈತ
ಇಂದು ಅವನ ಸ್ಥಿತಿ ಬರೀ ಜೀತ ಜೀತ
ದೇಶದ ಅನ್ನಕಾಗಿ ದುಡಿದು ದುಡಿದು ಸೋತ
ಇಂದಾಗಿದೆ ಅವನ ಬಾಳು ಬಲು ವಿಪರೀತ
ಒಂದೆಡೆ ಅನ್ನಕ್ಕಾಗಿ ಕ್ರಾಂತಿ ಕ್ರಾಂತಿ
ಮತ್ತೊಂದೆಡೆ ಅಜರ‍್ಣದ ವಾಂತಿ
ಎಂದೆದಿಗೂ ಆಗದಿದ್ದಲ್ಲಿ ಕ್ರಾಂತಿ
ದೇಶದ ಪ್ರಗತಿ ಕೇವಲ ಬ್ರಾಂತಿ
ಈ ಪಾಪ ಕೂಪದ ವಿಹ್ವಲ ಕತ್ತಲ ರಾಜ್ಯದ
ಅಕ್ರಮ ಕ್ರೌರ್ಯಗಳ ಮೆಟ್ಟಿ ಸಮಗಟ್ಟಲು
ಅವತರಿಸುವನೇ ಆ ಭಾರ್ಗವರಾಮ!
ಕುಸಿದಿರುವ ಭಾರತಾಂಬೆಯ ನಡುವಿಗೆ
ಊರುಗೋಲಾಗಲು ಬರುವನೇ ಅವತಾರಿ ಕಲ್ಕಿ?
ಎಲ್ಲಿದೆ ಆ ಧೀರತ್ವದ, ವೀರತ್ವದ, ಸಮಾನತೆಯ ಅರಿವಿನ
ದೇದಿಪ್ಯಮಾನದ ಜ್ಯೋತಿ
ತನ್ನ ತಾಸುಟ್ಟು ಲೋಕವ ಬೆಳಗುವ ಜ್ಯೋತಿ
ಆಗಬೇಕಿದೆ ಎಲ್ಲರಿಗೂ ಸ್ಫೂರ್ತಿ
ಕುಮಾರ ಸಿ
- Kumara.C
11 Feb 2020, 07:12 am
Download App from Playstore: